ಮಡಿಕೇರಿ, ಅ. ೧೩: ಈ ಬಾರಿ ಮಡಿಕೇರಿ ದಸರಾವನ್ನು ಸರಳವಾಗಿ ಆಚರಿಸುತ್ತಿದ್ದು, ತಾ. ೧೫ರ ಸಂಜೆ ೬ ಗಂಟೆಯಿAದ ದಶ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಹೇಳಿದರು.

ದಸರಾ ಸಮಿತಿ ಕಚೇರಿಯಲ್ಲಿ ನಡೆದ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಸರಕಾರ ಮಡಿಕೇರಿ ದಸರಾಕ್ಕೆ ರೂ. ೧ ಕೋಟಿ ಅನುದಾನ ನೀಡಿದೆ. ಈ ಪೈಕಿ ರೂ. ೨೫ ಲಕ್ಷಗಳನ್ನು ದಸರಾಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇನ್ನುಳಿದ ರೂ. ೭೫ ಲಕ್ಷಗಳನ್ನು ನಗರದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ ಎಂದು ಹೇಳಿದರು.

(ಮೊದಲ ಪುಟದಿಂದ) ಆಯುಧ ಪೂಜೆ ಮತ್ತು ದಸರಾ ಹಬ್ಬದಲ್ಲಿ ಯಾವುದೇ ರೀತಿಯ ಸಭಾ ಕಾರ್ಯಕ್ರಮಗಳನ್ನು ಈ ಬಾರಿ ಆಯೋಜಿಸುತ್ತಿಲ್ಲ ಎಂದು ರಮೇಶ್ ಹೇಳಿದರು.

ತಾ. ೧೫ರಂದು ರಾತ್ರಿ ದಂಡಿನ ಮಾರಿಯಮ್ಮ ದೇವಾಲಯಕ್ಕೆ ಶಕ್ತಿ ದೇವತೆಗಳ

ಕರಗಗಳು ಆಗಮಿಸಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬಳಿಕ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದು ದೇವಾಲಯಗಳಿಗೆ ಮರಳುತ್ತವೆ. ಶೋಭಾಯಾತ್ರೆ ನಡೆಸುವ ದಶ ಮಂಟಪಗಳು ತಾ. ೧೬ರ ಬೆಳಗಿನ ವೇಳೆ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಕಾರ್ಯ ನಡೆಸುತ್ತವೆ ಎಂದು ಹೇಳಿದರು. ಮಹದೇವಪೇಟೆ ಮಾರ್ಗವಾಗಿ ಶೋಭಾಯಾತ್ರೆ ನಡೆಯಲಿದ್ದು, ಗಣಪತಿ ಬೀದಿಗಾಗಿ ಮಂಟಪಗಳು ಮತ್ತೆ ತಮ್ಮ ಸ್ಥಾನಕ್ಕೆ ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿ ತಾ. ೧೫ರ ಸಂಜೆ ೫ ಗಂಟೆಯ ಬಳಿಕ ನಗರದೊಳಗೆ ಜನರಿಗೆ ತೊಂದರೆಯಾಗದ ರೀತಿಯಲ್ಲಿ ವಾಹನ ಸಂಚಾರ ನಿಯಂತ್ರಿಸುವುದು ಹಾಗೂ ಶೋಭಾ ಯಾತ್ರೆ ತೆರಳುವ ರಸ್ತೆ ಬದಿಯಲ್ಲಿ ಎಲ್ಲಾ ವಾಹನಗಳ ಪಾರ್ಕಿಂಗ್ ಅನ್ನು ತೆರವು ಮಾಡಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಕೆ.ಎಸ್. ರಮೇಶ್ ಮನವಿ ಮಾಡಿದರು. ಗಣಪತಿ ಬೀದಿಯ ರಸ್ತೆ ಗುಂಡಿ ಮುಚ್ಚಲು ನಗರಸಭೆಗೆ ಮನವಿ ಮಾಡಲಾಗಿದ್ದು, ಆ ಕಾರ್ಯವೂ ನಡೆಯುತ್ತದೆ ಎಂದು ರಮೇಶ್ ಹೇಳಿದರು.

ಸಂಘರ್ಷ ಬೇಡ

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆಸಿ ದಶ ಮಂಟಪಕ್ಕೆ ಒಂದು ಟ್ರಾö್ಯಕ್ಟರ್ ಮತ್ತು ಒಂದು ಸೌಂಡ್ ಸಿಸ್ಟಮ್ ವಾಹನ ಅಳವಡಿಸಲು ಅವಕಾಶ ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆ ಸೌಂಡ್ ಸಿಸ್ಟಮ್ ಬದಲು ಬ್ಯಾಂಡ್ ಸೆಟ್ ಬಳಸುವಂತೆ ಹೇಳಿದೆ. ಯಾವ ದಶ ಮಂಟಪಗಳೂ ಪೊಲೀಸ್ ಇಲಾಖೆಯ ಸೂಚನೆಯನ್ನು ಒಪ್ಪಲು ತಯಾರಿಲ್ಲ. ಸಚಿವರ ಸಭೆಯಲ್ಲಾದ ನಿರ್ಧಾರದಂತೆ ಶೋಭಾಯಾತ್ರೆ ನಡೆಯಲಿದೆ. ಈಗಾಗಲೇ ಮಂಟಪಗಳ ತಯಾರಿ ಕಾರ್ಯ ಭರದಿಂದ ನಡೆಯುತ್ತಿದೆ. ದಶ ಮಂಟಪಗಳಲ್ಲಿ ಚಲನ ವಲನ ಅಳವಡಿಸಿಕೊಳ್ಳುವುದು ಮಂಟಪ ಸಮಿತಿಗಳ ನಿರ್ಧಾರವಾಗಿದೆ. ಅಧಿಕಾರಿಗಳು, ಜಿಲ್ಲಾಡಳಿತ ಇದಕ್ಕೆ ಅವಕಾಶ ಮಾಡಿಕೊಡಬೇಕು. ದಶ ಮಂಟಪಗಳ ಸಾವಿರಾರು ಯುವಕರ ಮನಸಿಗೆ ನೋವು ಉಂಟು ಮಾಡುವ ಪ್ರಯತ್ನ ಬೇಡ. ಶೋಭಾಯಾತ್ರೆ ಸಂದರ್ಭ ಯಾವುದೇ ಸಂಘರ್ಷಗಳಿಗೂ ಅವಕಾಶ ಮಾಡಿಕೊಡುವುದು ಬೇಡ ಎಂದು ಕೆ.ಎಸ್. ರಮೇಶ್ ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ದಶ ಮಂಟಪಗಳ ಶೋಭಾಯಾತ್ರೆಯನ್ನು ನೋಡಲು ಆಗಮಿಸುವವರು ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಗುಂಪು ಸೇರದೆ ಸಾಮಾಜಿಕ ಅಂತರ ಕಾಪಾಡಿಕೊಂಡು ದಶ ಮಂಟಪಗಳ ಶೋಭಾಯಾತ್ರೆಯನ್ನು ವೀಕ್ಷಿಸುವಂತೆ ರಮೇಶ್ ಮನವಿ ಮಾಡಿದರು. ಸಭೆಯಲ್ಲಿ ಮಡಿಕೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಶ್ವೇತ ಪ್ರಶಾಂತ್, ಉಪಾಧ್ಯಕ್ಷರುಗಳಾದ ಡಿಶು, ಉದಯಕುಮಾರ್, ನೆರವಂಡ ಜೀವನ್, ಕಾರ್ಯದರ್ಶಿ ಉಷಾ ಕಾವೇರಪ್ಪ, ಉಪ ಸಮಿತಿಗಳ ಅಧ್ಯಕ್ಷರುಗಳಾದ ಬಿ.ಎಂ. ರಾಜೇಶ್, ಮನು ರಾಜೀವ್, ಕುಡೆಕಲ್ ಸಂತೋಷ್, ನಂದೀಶ್, ಪ್ರಮುಖರಾದ ಅರುಣ್ ಶೆಟ್ಟಿ, ಬೈ.ಶ್ರೀ. ಪ್ರಕಾಶ್, ಲೋಕೇಶ್ ಇತರರಿದ್ದರು.

ನಿಯಮಿತ ಧ್ವನಿವರ್ಧಕ ಬಳಕೆಗೆ ತೀರ್ಮಾನ

ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ತಾ. ೧೫ರಂದು (ನಾಳೆ) ನಡೆಯಲಿರುವ ವಿಜಯದಶಮಿಯ ಶೋಭಾಯಾತ್ರೆಯಲ್ಲಿ ದಶಮಂಟಪಗಳಲ್ಲಿ ನಿಯಮಿತ ಧ್ವನಿವರ್ಧಕವನ್ನು ಬಳಸಲು ಇಂದು ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪೊಲೀಸ್ ಇಲಾಖೆ ಧ್ವನಿವರ್ಧಕ ಬಳಸದಂತೆ ದಶಮಂಟಪ ಪದಾಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದೆ. ಆದರೆ ಧ್ವನಿವರ್ಧಕ ಬಳಸದೆ ಮೌನವ್ರತದಂತೆ ಉತ್ಸವ ಆಚರಿಸಲು ಸಾಧ್ಯವಿಲ್ಲ. ಆದ್ದರಿಂದ ನಿಯಮಿತ ಧ್ವನಿವರ್ಧಕಗಳನ್ನು ಬಳಸುವುದಾಗಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದರು. ವಿವಿಧ ಮಂಟಪ ಸಮಿತಿಗಳ ಪ್ರಮುಖರು ಮಾತನಾಡಿ ಈಗಾಗಲೇ ಧ್ವನಿವರ್ಧಕಕ್ಕೆ ಮುಂಗಡ ಹಣ ಪಾವತಿಸಲಾಗಿದೆ. ಕೊನೆಗಳಿಗೆಯಲ್ಲಿ ಧ್ವನಿವರ್ಧಕವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದರು. ಈ ಬಗ್ಗೆ ಕೆಲಕಾಲ ಚರ್ಚೆ ನಡೆದು ನಿಯಮಿತ ಧ್ವನಿವರ್ಧಕವನ್ನು ಮಂಟಪಗಳಲ್ಲಿ ಅಳವಡಿಸಲು ನಿರ್ಧರಿಸಲಾಯಿತು.

ವೇದಿಕೆ - ಗ್ಯಾಲರಿಗೆ ಹಣ ಬಳಕೆಯಾಗಲಿ

ದಸರಾಗೆ ಬಂದಿರುವ ೧ ಕೋಟಿ ಅನುದಾನವನ್ನು ದಸರಾಗೆ ಮಾತ್ರ ಬಳಸಬೇಕು ಎಂಬ ಒತ್ತಾಯಗಳು ಸಭೆಯಲ್ಲಿ ಕೇಳಿ ಬಂದವು. ಈ ಸಂದರ್ಭ ಮಾತನಾಡಿದ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಸರಳ ದಸರಾ ಹಿನ್ನೆಲೆಯಲ್ಲಿ ೨೫ ಲಕ್ಷವನ್ನು ಮಾತ್ರ ದಸರಾಗೆ ನೀಡಲಾಗಿದ್ದು, ಉಳಿದ ೭೫ ಲಕ್ಷವನ್ನು ನಗರದ ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತದೆ ಎಂದರು. ಈ ಸಂದರ್ಭ ದಸರಾ ಸಂಬAಧದ ಅನುದಾನವನ್ನು ರಸ್ತೆ ಕೆಲಸಕ್ಕೆ ಬಳಸುವುದಕ್ಕಿಂತ ನಗರದಲ್ಲಿ ದಸರಾ ಕಾರ್ಯಕ್ರಮಗಳಿಗೆ ಶಾಶ್ವತ ವೇದಿಕೆ, ಗ್ಯಾಲರಿ ನಿರ್ಮಾಣಕ್ಕೆ ಬಳಸುವುದು ಉತ್ತಮ ಎಂಬ ಸಲಹೆಗಳು ಕೇಳಿಬಂದವು, ಈ ಸಂಬAಧ ಎಲ್ಲ ಮಂಟಪಗಳು ತಮ್ಮ ಮನವಿ ಪತ್ರಗಳನ್ನು ಸಲ್ಲಿಸುವಂತೆ ತಿಳಿಸಿದ ರಮೇಶ್ ಅವುಗಳನ್ನು ಶಾಸಕರ ಮುಂದಿಟ್ಟು ಚರ್ಚಿಸಿ ತೀರ್ಮಾನಿಸೋಣ ಎಂದು ಹೇಳಿದರು.

ವೇದಿಕೆಯಲ್ಲಿ ದಶಮಂಟಪ ಸಮಿತಿ ಪ್ರಮುಖರಾದ ಕೃಷ್ಣ, ಜಿ.ವಿ. ರವಿಕುಮಾರ್, ದಸರಾ ಸಮಿತಿ ಕಾರ್ಯದರ್ಶಿ ಕುಶ (ಗಜೇಂದ್ರ) ಉಪಸ್ಥಿತರಿದ್ದರು.

ಸೆಸ್ಕ್ ಮನವಿ

ಮಂಟಪಗಳು ವಿದ್ಯುತ್ ಮಾರ್ಗದ ಎತ್ತರದಿಂದ ಕನಿಷ್ಟ ೧.೫ ಮೀಟರ್ ಅಂತರದಲ್ಲಿರುವAತೆ ಸಮಿತಿಗಳು ಗಮನ ಹರಿಸಬೇಕು. ಮಂಟಪಗಳ ಚಲನ ವಲನ ಸಂದರ್ಭ ಸುತ್ತಮುತ್ತ ವಿದ್ಯುತ್ ತಂತಿ ಇಲ್ಲದಿರುವುದನ್ನು ಖಾತರಿಪಡಿಸಿಕೊಳ್ಳಬೇಕು. ಯಾವುದೇ ವಿದ್ಯುತ್ ಅಪಘಾತಗಳು ಸಂಭವಿಸದAತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೆಸ್ಕ್ ಮನವಿ ಮಾಡಿದೆ.