ಸುಂಟಿಕೊಪ್ಪ, ಅ.೧೧: ಸುಮಾರು ೪ ತಿಂಗಳ ಹಿಂದೆ ಅಪರಿಚಿತ ವಾಹನದಿಂದ ಅಪಘಾತಕ್ಕೀಡಾಗಿದ್ದ ಮಾನಸಿಕ ಅಸ್ವಸ್ಥನೊಬ್ಬ ಕುಶಾಲನಗರ ರೋಟರಿ ಸಂಸ್ಥೆಯ ಪ್ರಮುಖರು ಹಾಗೂ ವಿಕಾಸ್ ಜನಸೇವಾ ಟ್ರಸ್ಟ್ ತೋರಿದ ಮಾನವೀಯ ಗುಣದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಅಪಘಾತದಿAದ ಗಾಯಗೊಂಡು ಕುಶಾಲನಗರ ರಸ್ತೆ ಬದಿ ಬಿದ್ದಿದ್ದ ತಮಿಳುನಾಡು ಮೂಲದ ಕುಮಾರ್ ಅವರನ್ನು ರೋಟರಿ ಸಂಸ್ಥೆಯ ಚಂದ್ರಶೇಖರ್ ಹಾಗೂ ಸುಂಟಿಕೊಪ್ಪ ವಿಕಾಸ್ ಜನಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ್ ಅವರುಗಳು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಸತತ ೪ ತಿಂಗಳ ಚಿಕಿತ್ಸೆಯಿಂದ ಗುಣಮುಖರಾಗಿರುವ ಕುಮಾರ್ ಅವರನ್ನು ಮತ್ತೆ ವಿಕಾಸ್ ಜನಸೇವಾ ಟ್ರಸ್ಟ್ನ ಆಶ್ರಮಕ್ಕೆ ಕರೆ ತರಲಾಗಿದೆ.
ಅಶ್ವಿನಿ ಆಸ್ಪತ್ರೆಯ ವೈದ್ಯರಾದ ಡಾ. ಆನಂದ್ ಚಿಕಿತ್ಸೆ ನೀಡಿದರು. ರೋಟರಿ ಮಿಸ್ಟಿಹಿಲ್ಸ್ನ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮತ್ತು ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ ಕುಮಾರ್ಗೆ ವಾಕರ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ.
ಮಾನಸಿಕ ಅಸ್ವಸ್ಥ ವ್ಯಕ್ತಿಯ ತಂದೆ, ತಾಯಿಯನ್ನು ಪತ್ತೆ ಹಚ್ಚಿ ಊರಿಗೆ ಕಳುಹಿಸಿಕೊಡಲಾಗುವುದು ಎಂದು ರಮೇಶ್ ತಿಳಿಸಿದ್ದಾರೆ.