ಸೋಮವಾರಪೇಟೆ, ಅ. ೧೧: ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ನಿಮಿಷಕ್ಕೆ ೩೯೦ ಲೀಟರ್ ಆಮ್ಲಜನಕ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿರುವ ಬೃಹತ್ ಆಮ್ಲಜನಕ ಉತ್ಪಾದನಾ ಘಟಕ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಎದುರು ನೋಡುತ್ತಿದೆ.
ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ಮೂಲಕ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೂ. ೧ ಕೋಟಿ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣವಾಗಿದ್ದು, ‘ಆನ್‌ಸೈಡ್ ಆಕ್ಸಿಜನ್ ಜನರೇಟ್ ಯೂನಿಟ್’ನ ಯಂತ್ರೋಪಕರಣ ಗಳನ್ನು ಅಳವಡಿಸಲಾಗಿದೆ.
ಆಮ್ಲಜನಕ ಉತ್ಪಾದನಾ ಘಟಕಕ್ಕೆ ನೂತನ ಕಟ್ಟಡ, ಜನರೇಟರ್ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸಲಾಗಿದ್ದು, ಜನರೇಟರ್‌ನಿಂದ ಘಟಕಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವದಷ್ಟೇ ಬಾಕಿಯಿದೆ.
ಈ ನೂತನ ಘಟಕ ನಿರ್ಮಾಣ ಗೊಂಡರೆ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ೧ ನಿಮಿಷಕ್ಕೆ ೩೯೦ ಲೀಟರ್ ಆಮ್ಲಜನಕ ಉತ್ಪಾದನೆಯಾಗಲಿದ್ದು, ಈ ಭಾಗದ ರೋಗಿಗಳಿಗೆ ವರದಾನವಾಗುವ ನಿರೀಕ್ಷೆಯಿದೆ. ಇದರೊಂದಿಗೆ ಕೊರೊನಾ ಸೋಂಕನ್ನು ಸಮರ್ಥ ವಾಗಿ ನಿಭಾಯಿಸುವ ಆತ್ಮವಿಶ್ವಾಸ ವೈದ್ಯಕೀಯ ವಲಯದಲ್ಲಿ ಮೂಡಿದೆ.
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ಪ್ರಯತ್ನದ ಫಲವಾಗಿ ರೂ.೯೫ ಲಕ್ಷಗಳನ್ನು ಈಗಾಗಲೇ ಸರ್ಕಾರ ಮಂಜೂರು ಮಾಡಿದ್ದು, ಆಕ್ಸಿಜನ್ ಘಟಕದ ನಿರ್ಮಾಣಕ್ಕಾಗಿ ಕಟ್ಟಡ ನಿರ್ಮಾಣ ಕಾಮಗಾರಿಯೂ ಪೂರ್ಣಗೊಂಡಿದ್ದು, ಜನರೇಟ್ ಯೂನಿಟ್‌ಗೆ ಶೆಡ್ ನಿರ್ಮಾಣವಾಗ ಬೇಕಿದೆ. ಇವೆಲ್ಲಾ ಕಾಮಗಾರಿಗಳು ಒಂದೆರಡು ದಿನಗಳಲ್ಲಿ ಮುಕ್ತಾಯವಾಗಲಿದೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿತ ಮತ್ತು ನಾನ್‌ಕೋವಿಡ್ ರೋಗಿಗಳಿಗೆ ಅನುಕೂಲವಾಗಲು ೫೦ ಬೆಡ್‌ಗಳಿಗೆ ಆಕ್ಸಿಜನ್ ಸೇವೆಯನ್ನು ಒದಗಿಸಲಾಗಿದೆ. ಆದರೆ ಆಕ್ಸಿಜನ್ ಖಾಲಿಯಾದರೆ ಮೈಸೂರಿನಿಂದ ತುಂಬಿಸಿ ತರಬೇಕು. ಇಲ್ಲೇ ಘಟಕ ಆರಂಭವಾದರೆ ಸ್ಥಳೀಯವಾಗಿ ಆಸ್ಪತ್ರೆ ಆವರಣದಲ್ಲಿಯೇ ನಿಮಿಷಕ್ಕೆ ೩೯೦ ಲೀಟರ್ ಆಕ್ಸಿಜನ್ ಉತ್ಪಾದನೆಯಾಗು ವುದರಿಂದ ಮೈಸೂರಿಗೆ ಹೋಗುವ ಅಗತ್ಯವಿರುವುದಿಲ್ಲ. ಇದರೊಂದಿಗೆ ೧೦೦ ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಆಸ್ಪತ್ರೆಯ ವೈದ್ಯರುಗಳು ಆಭಿಪ್ರಾಯಿಸಿದ್ದಾರೆ.
ಆಕ್ಸಿಜನ್ ಘಟಕಕ್ಕೆ ಅಗತ್ಯವಿರುವ ಕಂಪ್ರೆಸರ್, ವೆಂಟಿಲೇಟರ್ ಮತ್ತು ಆಕ್ಸಿಜನ್ ಕಾನ್ಸ್ನ್ ಟ್ರೇಟರ್ ಸೇರಿದಂತೆ ಇನ್ನಿತರ ಯಂತ್ರದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಈ ಯಂತ್ರೋಪಕರಣವು ಹೊರಗಿನ ಗಾಳಿಯನ್ನು ಎಳೆದುಕೊಂಡು ಶುದ್ಧ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಂತರ ನೇರವಾಗಿ ರೋಗಿಗಳಿಗೆ ನೀಡಲು ಸಾಧ್ಯವಾಗುತ್ತದೆ ಎಂದು ಸಂಬAಧಿಸಿದ ಏಜೆನ್ಸಿ ಅಭಿಯಂತರರು ತಿಳಿಸಿದ್ದಾರೆ.
ಕೊರೊನಾ ಪ್ರಥಮ ಅಲೆಗಿಂತಲೂ ಎರಡನೇ ಅಲೆಯಲ್ಲಿ ದೇಶದಲ್ಲಿ ಅತೀ ಹೆಚ್ಚು ಸಾವುಗಳು ಸಂಭವಿಸಿದ್ದು, ಇದೀಗ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಇದರೊಂದಿಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಳವಳ ಉಂಟಾಗಿದ್ದು, ಮೂರನೆ ಅಲೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದAತೆ ಎಚ್ಚರ ವಹಿಸಲು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
೩ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗದAತೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನೆಗಾಗಿ ಕೇಂದ್ರ ಸರ್ಕಾರ ‘ಪ್ರಾಜೆಕ್ಟ್ ಒ೨’ ಯೋಜನೆಗೆ ಚಾಲನೆ ನೀಡಿರುವುದರಿಂದ, ಆರೋಗ್ಯ ಇಲಾಖೆ ವಿಶೇಷ ಆದ್ಯತೆ ಯನ್ನು ಆಮ್ಲಜನಕ ಉತ್ಪಾದನಾ ವಲಯಕ್ಕೆ ನೀಡಲು ಮುಂದಾಗಿರುವ ಪರಿಣಾಮ ಸೋಮವಾರಪೇಟೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣವಾಗಿದೆ.
ಗ್ರಾಮೀಣ ಪ್ರದೇಶದ ಮಂದಿ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದು, ಆಕ್ಸಿಜನ್ ಬೇಕಾಗು ವಂತಹ ತುರ್ತು ಸಂದರ್ಭದಲ್ಲಿ ಮಡಿಕೇರಿ, ಮೈಸೂರು, ಹಾಸನಕ್ಕೆ ತೆರಳಬೇಕಾಗಿತ್ತು. ಇದೀಗ ಸ್ಥಳೀಯವಾಗಿಯೇ ಆಕ್ಸಿಜನ್ ಸಹಿತ ಬೆಡ್‌ಗಳ ವ್ಯವಸ್ಥೆಯಾಗುತ್ತಿದ್ದು, ರೋಗಿಗಳ ಪಾಲಿಗೆ ಹೆಚ್ಚಿನ ಉಪಯೋಗವಾಗಲಿದೆ.
೧೦೦ ಬೆಡ್ ಸಾಮರ್ಥ್ಯವುಳ್ಳ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್‌ಗೆ ಅಗತ್ಯವಿರುವ ಆಮ್ಲಜನಕವನ್ನು ಒದಗಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ನೂತನ ಘಟಕದಿಂದಾಗಿ ಹೆಚ್ಚಿನ ಅನುಕೂಲವಾಗಲಿದ್ದು, ರೋಗಿಗಳಿಗೆ ಅವಶ್ಯಕ ಸಂದರ್ಭದಲ್ಲಿ ಆಮ್ಲಜನಕದ ಕೊರತೆಯಾಗುವುದಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ
-ವಿಜಯ್ ಹಾನಗಲ್