ಗೋಣಿಕೊಪ್ಪಲು, ಅ. ೧೧: ಪೊನ್ನಂಪೇಟೆಯ ನಾಡ ಕಚೇರಿಗೆ ದಿಢೀರ್ ಭೇಟಿ ನೀಡಿದ ತಾಲೂಕು ತಹಶೀಲ್ದಾರ್ ಯೋಗಾನಂದ್ ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪೊನ್ನಂಪೇಟೆ ನಾಡ ಕಚೇರಿಯ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಕೆಲಸಕ್ಕೆ ಹಾಜರಾಗದೆ ಹಾಗೂ ಕಡತಗಳನ್ನು ವಿಲೇವಾರಿ ಮಾಡಲು ಹಿಂದೇಟು ಹಾಕುತ್ತಿರುವ ಬಗ್ಗೆ ಸಾರ್ವಜನಿಕರು ತಹಶೀಲ್ದಾರ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ನಾಡ ಕಚೇರಿಗೆ ಮುಂಜಾನೆಯೇ ಆಗಮಿಸಿದ ತಹಶೀಲ್ದಾರ್ ಯೋಗಾನಂದ್ ಕರ್ತವ್ಯ ನಿರತ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಗದಿತ ಸಮಯದಲ್ಲಿ ಕಡತವನ್ನು ವಿಲೇವಾರಿ ಮಾಡದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಕಚೇರಿಯಲ್ಲಿನ ಕೆಲ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ನಡೆದು ಕೊಳ್ಳುತ್ತಿರುವ ರೀತಿ ಸರಿಯಿಲ್ಲ, ಕಡತಗಳ ಬಗ್ಗೆ ವಿಚಾರಿಸಿದರೆ ಸಂಬAಧವಿಲ್ಲದAತೆ ವರ್ತಿಸುತ್ತಾರೆ. ಕಡತಗಳ ಬಗ್ಗೆ ಹಲವಷ್ಟು ಬಾರಿ ಅಲೆದಾಡಿಸುತ್ತಾರೆ ಎಂದು ದೇವರಪುರದ ರೈತರಾದ ಅರುಣ್ ಪೂಣಚ್ಚ ತಹಶೀಲ್ದಾರ್ ಯೋಗಾನಂದ ಅವರ ಗಮನ ಸೆಳೆದರು. ಕಡತಗಳು ಈಗಾಗಲೇ ನೀಡಿ ವರ್ಷಗಳೇ ಕಳೆದಿವೆ. ದಿನಕ್ಕೊಂದು ಕಡತಗಳನ್ನು ಜೋಡಿಸುವಂತೆ ಹೇಳುತ್ತಾರೆ. ಇದರಿಂದ ಸಮಯದ ವ್ಯರ್ಥದೊಂದಿಗೆ ಕೆಲಸವೂ ಆಗುತ್ತಿಲ್ಲ ಎಂದು ನೇರವಾಗಿ ಆರೋಪಿಸಿದರು.

ಇವರ ಸಮ್ಮುಖದಲ್ಲಿಯೇ ತಹಶೀಲ್ದಾರ್ ಯೋಗಾನಂದ್ ಸಿಬ್ಬಂದಿಗಳನ್ನು ವಿಚಾರಣೆಗೊಳಪಡಿಸಿ ಎಲ್ಲಾ ಕಡತಗಳು ನಿಗದಿತ ಸಮಯದಲ್ಲಿ ವಿಲೇವಾರಿ ಆಗಬೇಕು ಕಚೇರಿಗೆ ಆಗಮಿಸಿ ಕಡತ ನೀಡುವ ಸಂದರ್ಭ ಸಂಬAಧಿಸಿದವರಿಗೆ ದೃಢೀಕರಣ ನೀಡಬೇಕು. ಅನಾವಶ್ಯಕ ವಾಗಿ ಅಲೆದಾಟ ನಡೆಸುವುದು ಕಂಡು ಬಂದರೆ ನಿರ್ದಾಕ್ಷೀಣ್ಯಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಪೊನ್ನಂಪೇಟೆ ನಾಡ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಇವರಿಂದ ಬರುವ ಕಡತಗಳು ಮಾತ್ರ ವಿಲೇವಾರಿ ಆಗುತ್ತಿವೆ. ನೇರವಾಗಿ ತೆರಳುವ ನಾಗರಿಕರ ಕಡತಗಳಿಗೆ ನೆಪ ಹೇಳುವ ಮೂಲಕ ಅಲೆದಾಡಿಸುತ್ತಿದ್ದಾರೆ. ಕಚೇರಿಗೆ ತೆರಳುವ ನಾಗರಿಕರನ್ನು ಇತ್ತೀಚೆಗೆ ಆಗಮಿಸಿದ ಸಿಬ್ಬಂದಿಗಳು ಗೌರವವಾಗಿ ಕಾಣುತ್ತಿಲ್ಲ ಎಂದು ಹಲವು ಮಂದಿ ತಮ್ಮ ಅಸಮಾಧಾನ ತೋಡಿಕೊಂಡರು.

ಈ ವೇಳೆ ಪೊನ್ನಂಪೇಟೆ ತಾಲೂಕು ಕಚೇರಿಯ ಅಧಿಕಾರಿ ರಾಧಕೃಷ್ಣ, ನಾಡಕಚೇರಿಯ ಕಂದಾಯ ಪರಿವೀಕ್ಷಕ ಸುಧೀರ್, ವಿವಿಧ ಸಿಬ್ಬಂದಿಗಳು, ಹಿರಿಯ ನಾಗರಿಕರು ಹಾಜರಿದ್ದರು.

-ಹೆಚ್.ಕೆ.ಜಗದೀಶ್