ಚೆಟ್ಟಳ್ಳಿ, ಅ. ೯: ಸಾಮಾನ್ಯ ಸಭೆಗೆ ಪಂಚಾಯಿತಿ ಸದಸ್ಯರು ಗೈರು ಹಾಜರಾದ ಪರಿಣಾಮ ಕೋರಂ ಇಲ್ಲದೆ ಸಭೆ ನಡೆಸಲಾಗದೆ ಹಾಜರಾಗಿದ್ದ ಸದಸ್ಯರು ಅಧ್ಯಕ್ಷರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಪಂಚಾಯಿತಿಯ ಆಡಳಿತ ಅವ್ಯವಸ್ಥೆಯ ಬಗ್ಗೆ ದಿನೇದಿನೇ ಸುದ್ದಿಯಾಗುತ್ತಿರುವ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಏರ್ಪಡಿಸಲಾಗಿತ್ತು. ಕಳೆದ ಬಾರಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೆಲವು ಸದಸ್ಯರು ಸಭೆಯಿಂದ ಎದ್ದು ಹೋಗುತ್ತಿದ್ದಂತೆ ಅಧ್ಯಕ್ಷರು ಸಭೆಯನ್ನು ಬರಕಾಸ್ತು ಮಾಡದೆ ಹೊರನಡೆದ ಹಿನ್ನೆಲೆ ಸಾರ್ವಜನಿಕ ಅರ್ಜಿ ವಿಲೇವಾರಿ, ಹಲವು ವಿಚಾರಗಳು ಚರ್ಚೆಯಾಗದೆ ಉಳಿದವು.

ತಾ. ೭ ರಂದು ಚೆಟ್ಟಳ್ಳಿ ಪಂಚಾಯಿತಿ ಎದುರು ಚೆಟ್ಟಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ಸಹಕಾರ ಸಂಘದ ಅತಿಥಿ ಗೃಹ ನಡೆಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ ಗಂಭೀರ ವಿಚಾರ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಸಭೆಯಲ್ಲಿ ಅಧ್ಯಕ್ಷರು ಸೇರಿ ಕೇವಲ ೫ಸದಸ್ಯರು ಹಾಜರಾಗಿದ್ದು, ಉಳಿದವರು ಗೈರು ಹಾಜರಾದ ಬಗ್ಗೆ ಪಂಚಾಯಿತಿ ಸದಸ್ಯ ಬಲ್ಲಾರಂಡ ಕಂಠಿ ಕಾರ್ಯಪ್ಪ ಹಾಗೂ ಹಾಜರಾದ ಸದಸ್ಯರು ಅಧ್ಯಕ್ಷ ಪಿ.ಟಿ.ಮುತ್ತಪ್ಪ ಅವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಲ್ಲೇ ಒಮ್ಮತವಿಲ್ಲದ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಅವ್ಯವಸ್ಥೆಯ ಬಗ್ಗೆ ಖೇದ ವ್ಯಕ್ತಪಡಿಸಿದರು.