ಚೆಟ್ಟಳ್ಳಿ, ಅ. ೯: ಬಡವರ ಪಾಲಿನ ಬಸವ ಆಶ್ರಯ ಮನೆ ಯೋಜನೆಯಡಿ ಮನೆ ನಿರ್ಮಾಣಕ್ಕೆ ಚೆಟ್ಟಳ್ಳಿಯ ಮಡಿವಾಳ ಕುಟುಂಬವೊAದು ಅರ್ಜಿ ಸಲ್ಲಿಸಿ ಎರಡೂವರೆ ವರ್ಷಗಳೇ ಕಳೆದರೂ ಬಡ ಕುಟುಂಬವೊAದು ಶಿಥಿಲಗೊಂಡ ಮನೆಯೊಳಗೆ ಬದುಕು ಸಾಗಿಸುವಂತಾಗಿದೆ.

ಸೋಮವಾರಪೇಟೆ ತಾಲೂಕು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸರ್ವೆ ನಂ. ೨೧೧/೯ರಲ್ಲಿ ೦.೫೦ರ ಪೈಸಾರಿ ಜಾಗದಲ್ಲಿ ಸುಮಾರು ೮೦ ವರ್ಷಗಳ ಹಿಂದೆಯೇ ಊರಿನ ಹಿರಿಯರು ಊರಿಗೊಬ್ಬ ಮಡಿವಾಳರ ಕುಟುಂಬ ಇರಲೆಂದು ಜಾಗವನ್ನು ಗುರುತಿಸಿ ಹಿರಿಯಜ್ಜನ ಹೆಸರಿಗೆ ಜಾಗ ಮಾಡಿಕೊಟ್ಟರು.

ಆ ಜಾಗದಲ್ಲೆ ಹುಲ್ಲಿನ ಗುಡಿಸಲು ಮನೆಯನ್ನು ಕಟ್ಟಿ ವಾಸಿಸತೊಡಗಿ ಹಲವು ವರ್ಷಗಳ ನಂತರ ಮಣ್ಣನ್ನು ಕಲಸಿ ಉಂಡೆಮಾಡಿ ಗೋಡೆ ನಿರ್ಮಿಸಿ ಬಿದಿರು ಕಾಡು ಮರದಿಂದ ಮನೆಮಾಡಿ ಹೆಂಚಿನ ಮನೆಕಟ್ಟಿಕೊಂಡರು. ಹಿರಿಯರು ನೀಡಿದ ಸೂರಿನಲ್ಲೇ ಈಗ ಮಕ್ಕಳು ಮರಿಮಕ್ಕಳು ಬದುಕುಕಟ್ಟಿ ಕೊಳ್ಳುವಂತಾಗಿದೆ

ಕುAಞಮ್ಮ ಸಾವಿನವರೆಗೂ ನನಸಾಗದ ಸೂರಿನ ಕನÀಸು...

ಮನೆಯ ಹಿರಿಯರಾದ ಗಂಡ ಮಾದವ ಅನಾರೋಗ್ಯದಿಂದ ಮರಣ ಹೊಂದಿದ ನಂತರ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿ ಪತ್ನಿ ಕುಂಞಮ್ಮಳ ಮೇಲಿತ್ತು.

ಬಡವರ ಪಾಲಿನ ಸೂರಿಗಾಗಿ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಮೆಟ್ಟಿಲೇರಿ ದಾಖಲೆಗಳನೆಲ್ಲ ಸೇರಿಸಿ ಅರ್ಜಿ ಸಲ್ಲಿಸಿದರು. ೯.೨.೨೦೧೮ರಂದು ಪಂಚಾಯಿತಿ ಸಿಬ್ಬಂದಿಗಳು ಪರಿಶೀಲಿಸಿ ನಿಮ್ಮ ಹೆಸರಿಗೆ ಮನೆ ಮಂಜೂರಾಗಿದೆ. ಅದಕ್ಕೆ ಸಂಬAಧಿಸಿದ ೯ ದಾಖಲೆ ಗಳನ್ನು ಹಾಜರುಪಡಿಸುವಂತೆ ತಿಳಿವಳಿಕೆ ಪತ್ರ ನೀಡಲಾಯಿತು.

ಇನ್ನೇನು ಬಸವ ಆಶ್ರಯ ಮನೆ ಯೋಜನೆಯ ಸೂರಿನ ಕನಸು ನನಸಾಗಲಿದೆ ಎಂದು ಸೊಸೆ ಮಂಜುಳಾ ಸ್ಥಳೀಯ ಧರ್ಮಸ್ಥಳ ಸ್ವಸಹಾಯ ಸಂಘದಿAದ ಒಂದು ಲಕ್ಷ ಸಾಲಮಾಡಿ ೪ ಕೋಣೆಯ ಒಂದು ಪುಟ್ಟ ಮನೆಗೆ ಅಡಿಪಾಯ ಹಾಕಲಾಯಿತು.

ರಸ್ತೆ ಸಂಪರ್ಕವೇ ಇಲ್ಲದ ಮನೆಗೆ ದೂರದ ಬೇರೊಬ್ಬರ ಮನೆಯ ಅಂಗಳದಲ್ಲಿ ತಂದು ಹಾಕಲಾದ ಕೆಂಪುಕಲ್ಲು, ಮರಳು, ಸಿಮೆಂಟನ್ನು ತಲೆಯ ಮೇಲೆ ಹೊತ್ತು ಗದ್ದೆಯ ದಾರಿಯಲ್ಲಿ ಸಾಗಿಸಲು ಸುಮಾರು ರೂ.೩೦೦೦೦/- ಖರ್ಚಾಗಿ ಹೋಯಿತು.

ಆ ಸಮಯದಲ್ಲಿ ಪಂಚಾಯಿತಿ ಸಿಬ್ಬಂದಿಗಳು ಎರಡು ಮೂರು ಬಾರಿ ಬಂದು ಕುಟುಂಬದ ಸದಸ್ಯರನ್ನು ತಳಪಾಯ ಎದುರು ನಿಲ್ಲಿಸಿ ಫೋಟೊ ತೆಗೆಯಲು ಬಂದ ಖರ್ಚು ರೂ. ೫೦೦ ಪಡೆದು ತೆರಳಿದರೇ ಹೊರತು ಯಾವ ಪ್ರಗತಿಯೂ ಕಾಣಲಿಲ್ಲ.

ಇದೇ ಸಂದರ್ಭ ಅರ್ಜಿ ಸಲ್ಲಿಸಿದ ಕುಂಞಮ್ಮ ಅನಾರೋಗ್ಯದಿಂದ ಹಾಸಿಗೆ ಹಿಡಿದವಳು ಮೃತಪಟ್ಟು ಮನೆಯ ಕನಸೂ ಕುಂಞಮ್ಮಳೊAದಿಗೆ ಮರೆಯಾದಂತಾಗಿದೆ.

ಸೂರಿಗಾಗಿ ಪಡೆದ ಸಂಘದ ಸಾಲಕ್ಕೆ ಏರಿದ ಬಡ್ಡಿ...

ತಳಪಾಯ ನಿರ್ಮಿಸಿದ ಮೊದಲ ಕಂತಿನ ಹಣ ಇವತಲ್ಲ ನಾಳೆ ಬರುತದೆಂದು ಕಾದದ್ದು ಈವರೆಗೆ ನಯಾಪೈಸೆ ಬರಲಿಲ್ಲ. ಪಂಚಾಯಿತಿಯಲ್ಲಿ ವಿಚಾರಿಸಿದಾಗ ಬ್ಯಾಂಕ್ ಖಾತೆಯ ಮಾಹಿತಿ ಕೊಡಿ, ನಿಮ್ಮ ಮೊಬೈಲಿಗೆ ಮಾಹಿತಿ ಬರುತ್ತದೆಂಬ ಹಾರಿಕೆಯ ಉತ್ತರ. ಸೂರಿನ ಅಡಿಪಾಯಕ್ಕಾಗಿ ಸಂಘದಿAದ ಪಡೆದ ಸಾಲದ ಬಡ್ಡಿ ದಿನೇದಿನೇ ಏರತೊಡಗಿ ೬೦ ಸಾವಿರ ಪಾವತಿಸಲಾಗಿ ಇನ್ನುಳಿದ ಸಾಲ ಪಾವತಿಸಲು ಬಾಕಿ ಇದೆ.

ತಾವು ಅರ್ಜಿ ಸಲ್ಲಿಸಿದ ನಂತರ ಆಶ್ರಯ ಮನೆಗೆ ಅರ್ಜಿ ಸಲ್ಲಿಸಿದವರಿಗೆಲ್ಲ ಆಶ್ರಯ ಮನೆ ದೊರೆತಿದೆ ನಮಗೇಕೆ ಇಲ್ಲವೆಂಬ ನೋವಿನ ಮಾತು ಈ ಕುಟುಂಬದಾಗಿದೆ.

ಗ್ರಾಮಸಭೆಯಲ್ಲಿ ಪ್ರತಿಧ್ವನಿಸಿದ ಕುಂಞಮ್ಮಳ ಆಶ್ರಯಮನೆ..

ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ನಡೆದ ಗ್ರಾಮಸಭೆಯಲ್ಲಿ ಕುಂಞಮ್ಮಳ ಆಶ್ರಯ ಮನೆಯ ಬಗ್ಗೆ ಸ್ಥಳೀಯರೊಬ್ಬರು ಪ್ರಶ್ನಿಸಿದ್ದಾಗ ಕುಂಞಮ್ಮ ಸತ್ತು ಹೋದಳು. ಮುಂದಿನ ತೀರ್ಮಾನ ಕೈಗೊಳ್ಳುತೇವೆಂಬ ಪಂಚಾಯಿತಿ ಯವರ ಉತ್ತರಕ್ಕೆ ಕುಂಞಮ್ಮ ಮಾತ್ರ ಸತ್ತದ್ದು ಅವರ ಉಳಿದ ಕುಟುಂಬ ಸದಸ್ಯರು ಸತ್ತುಹೋದರೆ? ಕುಂಞಮಳಿಗೆ ಬಿಡುಗಡೆಯಾದ ಬಸವ ವಸತಿ ಯೋಜನೆ ಮಗನ ಹೆಸರಿಗೋ, ಇನ್ನೊಬ್ಬ ಮಗನ ವಿಧವೆ ಪತ್ನಿಯ ಹೆಸರಿಗೋ ಮಂಜೂರು ಮಾಡಬಹುದಿತ್ತಲ್ಲವೇ? ಎಂಬಮಾತು ಗ್ರಾಮ ಸಭೆಯೊಳಗೆ ಕೇಳದೆ ಹೋಯಿತು.

ಅತ್ತ ಕಾಲು ಸೇತುವೆಯೂ ಇಲ್ಲ.. ಇತ್ತ ಇಂಗು ಗುಂಡಿಯೂ ಇಲ್ಲ...

ಈ ಕುಟುಂಬದ ವಸತಿ ಯೋಜನೆಯ ಕಥೆ ಒಂದಾದರೆ ಮನೆಯ ಎದುರು ಮಳೆಗಾಲದಲ್ಲಿ ಹರಿವ ತೋಡಿನ ನೀರಿನ ಹರಿವಿನ ನಡುವೆ ಪುಟ್ಟಪುಟ್ಟ ಮಕ್ಕಳು, ಪೋಷಕರು, ಕಿರಿದಾದ ಬಡಿಗೆಯ ಅಪಾಯದ ಪಾಲದ ನಡುವೆಯೇ ತೋಡು ದಾಟಿ ಗದ್ದೆಗಳ ಕಾಲುದಾರಿಯಲ್ಲಿ ಮುಖ್ಯ ರಸ್ತೆಗೆ ಸೇರುವ ಪರಿಸ್ಥಿತಿ.

ಶಾಶ್ವತ ಕಾಲು ಸೇತುವೆ ನಿರ್ಮಾಣಕ್ಕೆ ಚೆಟ್ಟಳ್ಳಿ ಪಂಚಾಯಿತಿಗೆ ಹಲವು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಪ್ರಯೋಜನಕ್ಕೆ ಬಾರಲಿಲ್ಲ.

ಸರಕಾರದ ಇಂಗುಗುAಡಿ ಯೋಜನೆಗೆ ನೀವು ಅರ್ಜಿ ಸಲ್ಲಿಸಿ ನಾವು ಮಾಡಿಸಿ ಕೊಡುತ್ತೇವೆಂದು ಹೇಳಿ ಹೋದವರು ಮತ್ತೆ ತಿರುಗಿ ನೋಡಲೇ ಇಲ್ಲ. ಓಟು ನೀಡಲು ಕೈ ಮುಗಿದು ಬೇಡಿಕೊಂಡವರು ಈಗೆಲ್ಲಿ? ಬಡವರ ಕೂಗಿಗೆ ಬೆಲೆಯೇ ಇಲ್ಲವೆಂಬುದಕ್ಕೆ ಇದೇ ಸಾಕ್ಷಿ.

- ಪುತ್ತರಿರ ಕರುಣ್ ಕಾಳಯ್ಯ