ವೀರಾಜಪೇಟೆ, ಅ. ೯: ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಕೀಲರ ಸಂಘ ವೀರಾಜಪೇಟೆ ಮತ್ತು ಆರ್ಜಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎನ್. ಉಪೇಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು, ತಾ.ಕಾ.ಸೇವೆಗಳ ಸಮಿತಿ ಅಧ್ಯಕ್ಷರಾದ ಲೋಕೇಶ್ ಎಂ.ಜಿ. ಅವರು ಪೋಕ್ಸೋ ಕಾಯ್ದೆ ಮತ್ತು ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಿಕೆ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಮಹಿಳೆಯೊಬ್ಬರು ತರ್ಮೆಕಾಡ್ ಪೈಸಾರಿಯ ಅಂಗಡಿಯೊAದರಲ್ಲಿ ಸಾರಾಯಿ ಮತ್ತು ಗಾಂಜಾ ಪೊಟ್ಟಣಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಯುವಕರು- ಪುರುಷರು ದುಶÀ್ಚಟಗಳಿಗೆ ದಾಸರಾಗಿ ಕಲಹಗಳು ನಡೆಯುತ್ತಿದೆ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡರು. ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಟಿ. ಬಷೀರ್ ಮತ್ತು ಜಹಶೀರ್ ಆಲಿ ಮಹಿಳೆಯ ಮನವಿಯನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಕಾನೂನು ಸಮಿತಿಗೆ ಅರ್ಜಿಯನ್ನು ಸಲ್ಲಿಸುವಂತೆ ತಿಳಿಸಿದರಲ್ಲದೆ, ಸಮಿತಿಯು ಸೂಕ್ತ ಕ್ರಮವಹಿಸುತ್ತದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಪಿ.ಡಿ.ಓ ರಾಜನ್ ಆರ್. ಮಾತನಾಡಿದರು.
ಪ್ರಥಮ ದರ್ಜೆ ಸಹಾಯಕರಾದ ಜಯಪ್ಪ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪಿ.ಡಿ.ಓ ರಾಜನ್ ವಂದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜೋಸೆಫ್ ಟಿ, ಸುನಿತಾ ಹರಿದಾಸ್, ಫಾತೀಮ, ಕವಿತಾ ಮತ್ತು ಬೋಪಣ್ಣ ಹಾಗೂ ವಿವಿಧ ಸ್ವಸಹಾಯ ಸಂಘ ಮತ್ತು ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.