ಕುಶಾಲನಗರ, ಅ. ೯: ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ವಾಸವಿ ಮಾತೆಗೆ ಜಗತ್ ಪ್ರಸೂತಿಕ ಅಲಂಕಾರವನ್ನು ಅರ್ಚಕರಾದ ಯೋಗೀಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ನಡೆಸಲಾಯಿತು.

ನವರಾತ್ರಿ ಅವಧಿಯಲ್ಲಿ ಬ್ರಾಹ್ಮೀ ಅಲಂಕಾರ, ಸಿಂಹವಾಹಿನಿ, ಮಹೇಶ್ವರಿ, ಇಂದ್ರಾಣಿ, ಸರಸ್ವತಿ, ಅನ್ನಪೂರ್ಣೇಶ್ವರಿ, ಮಹಿಷಾಸುರ ಮರ್ಧಿನಿ ಮತ್ತು ಆಭರಣ ಅಲಂಕಾರ ನಡೆಯಲಿದೆ ಎಂದು ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್. ಉದಯಕುಮಾರ್ ತಿಳಿಸಿದ್ದಾರೆ.

ನವರಾತ್ರಿ ಪ್ರಯುಕ್ತ ದಿನಂಪ್ರತಿ ಬೆಳಿಗ್ಗೆ ೭ ಗಂಟೆಗೆ ಅಭಿಷೇಕ, ೮.೩೦ಕ್ಕೆ ಮಹಾಮಂಗಳಾರತಿ, ಸಂಜೆ ೬ಕ್ಕೆ ಸಹಸ್ರನಾಮ, ೬.೩೦ಕ್ಕೆ ಭಜನೆ, ೭.೩೦ಕ್ಕೆ ದೇವಸ್ಥಾನದ ಆವರಣದಲ್ಲಿ ಉತ್ಸವ, ೮.೩೦ಕ್ಕೆ ಮಹಾಮಂಗಳಾರತಿ ನಡೆಸಿ ಪ್ರಸಾದ ವಿನಿಯೋಗ ಮಾಡಲಾಗುವುದು. ಹಬ್ಬದ ಪ್ರಯುಕ್ತ ಮಹಿಳಾ ಮಂಡಳಿ ವತಿಯಿಂದ ತಾ. ೧೩ ರಂದು ೭ ಗಂಟೆಗೆ ೮ ವರ್ಷ ಒಳಪಟ್ಟ ಕನ್ಯೆಯರಿಗೆ ಪಾದಪೂಜೆ ಮಾಡಲಾಗುತ್ತದೆ ಎಂದು ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ ತಿಳಿಸಿದ್ದಾರೆ.

ನವರಾತ್ರಿ ನವ ಧಾನ್ಯಗಳಿಂದ ಚಿತ್ರಕ್ಕೆ ಅಲಂಕಾರ ಮಾಡುವ ಸ್ಪರ್ಧೆಯನ್ನು ವಾಸವಿ ಯುವತಿಯರ ಸಂಘ ಹಮ್ಮಿಕೊಂಡಿದೆ. ರಸಪ್ರಶ್ನೆ ಸ್ಪರ್ಧೆ, ಸಪ್ತಮಿಯಂದು ಜ್ಞಾನದ ಮಾತೃ ದೇವತೆಯಾದ ಸರಸ್ವತಿ ಆರಾಧನೆಯನ್ನು ಅರ್ಯವೈಶ್ಯ ಜನಾಂಗದ ಮಕ್ಕಳಿಗಾಗಿ ನಡೆಸಲಾಗುತ್ತದೆ ಎಂದು ಕನ್ನಿಕಾ ನಾಗ್ ತಿಳಿಸಿದ್ದಾರೆ.