ಗೋಣಿಕೊಪ್ಪಲು, ಅ. ೮: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಮುಖಂಡರ ಮೇಲೆ ದಾಖಲಿಸುತ್ತಿರುವ ಸುಳ್ಳು ಮೊಕದ್ದಮೆಗಳನ್ನು ವಿರೋಧಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲಾ ಘಟಕದಿಂದ ಕುಟ್ಟ ಪೊಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ವೀರಾಜಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಮೇಲೆ ನಿರಂತರ ಹಲ್ಲೆಗಳಾಗುತ್ತಿವೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಅವುಗಳೆಲ್ಲವೂ ಬೆಳಕಿಗೆ ಬಾರದೆ ಮರೆಯಾಗುತ್ತಿವೆ. ಇಂತಹ ಅನ್ಯಾಯಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು, ನೊಂದ ಕುಟುಂಬಗಳಿಗೆ ರಕ್ಷಣೆ ನೀಡುವ ಮೂಲಕ ಸೂಕ್ತ ನ್ಯಾಯವನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹುದಿಕೇರಿ ಬಳಿಯ ಹೈಸೊಡ್ಲೂರು ಸರ್ವೆ ನಂಬರ್ ೧೮೧/೧ಪಿ೧ನಲ್ಲಿ ೮ ಎಕರೆ ಸರ್ಕಾರಿ ಜಾಗದಲ್ಲಿ ಪರಿಶಿಷ್ಟ ಪಂಗಡದವರು ೫ ವರ್ಷದಿಂದ ಪ್ಲಾಸ್ಟಿಕ್ ಗುಡಿಸಲು ಹಾಕಿಕೊಂಡು ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ಮನೆ ನಿರ್ಮಿಸಿಕೊಟ್ಟು ಎಲ್ಲಾ ರೀತಿಯ ಮೂಲ ಸೌಕರ್ಯ ಒದಗಿಸಿಕೊಡಬೇಕು. ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದಲ್ಲಿ ತೆರ್ಮೆಕಾಡು ಪೈಸಾರಿ ಸರ್ವೆ ನಂಬರ್ ೩೧೫/೧ಪಿ೧ರಲ್ಲಿ ೩೦ ವರ್ಷಗಳಿಂದ ವಾಸಿಸುತ್ತಿರುವ ವಿವಿಧ ಜನಾಂಗದ ಬಡವರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು. ಕುಟ್ಟ ಮುಖ್ಯ ಪಟ್ಟಣದಲ್ಲಿ ದಸಂಸ ಕಾರ್ಯಕರ್ತರು ಮೆರವಣಿಗೆ ನಡೆಸಿ ಬಳಿಕ ವೃತ್ತ ನಿರೀಕ್ಷಕ ಜಯರಾಮ್‌ರವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ ಹಿರಿಯ ಮುಖಂಡ ಟಿ.ಎನ್. ಗೋವಿಂದಪ್ಪ, ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ರಜನಿಕಾಂತ್, ಶಿವಕುಮಾರ್, ಕುಮಾರ್ ಮಹದೇವ್, ಜಿಲ್ಲಾ ಕಲಾ ತಂಡದ ಸಂಚಾಲಕ ಎಸ್.ಟಿ. ಗಿರೀಶ್, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಸತೀಶ್, ತಾಲೂಕು ಸಂಚಾಲಕ ಚಂದ್ರು, ತಾಲೂಕು ಸಂಘಟನಾ ಸಂಚಾಲಕ ಗಣೇಶ್, ಕರ್ಕು, ರಮೇಶ್ ಬೆಳ್ಳೂರು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. -ಹೆಚ್.ಕೆ.ಜಗದೀಶ್