ಕುಶಾಲನಗರ, ಅ. ೯: ವಿಶ್ವವಿಖ್ಯಾತ ಮೈಸೂರು ದಸರಾ ತಾಲೀಮು ನಡೆಸುವ ಸಂದರ್ಭ ಮದವೇರಿ ಜಂಬೂ ಸವಾರಿಯಿಂದ ಹೊರಗುಳಿದಿರುವ ದುಬಾರೆಯ ವಿಕ್ರಂ ಘಟನೆ ಬೆನ್ನಲ್ಲೇ, ಜಿಲ್ಲೆಯ ಮತ್ತೊಂದು ಸಾಕಾನೆ ಶಿಬಿರವಾದ ಮತ್ತಿಗೋಡು ಶಿಬಿರದ ೩೮ ವರ್ಷದ ಆನೆ ಗೋಪಾಲಸ್ವಾಮಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ದಸರಾ ಮಹೋತ್ಸವದಲ್ಲಿ ಗಾಬರಿಗೊಂಡು ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ರೀತಿಯಲ್ಲಿ ಶ್ರೀರಂಗಪಟ್ಟಣದಲ್ಲಿ ಕೂಡ ನಡೆಸಲಾಗುತ್ತಿದೆ. ಅದೇ ಪದ್ಧತಿ ಇಂದಿಗೂ ಮುಂದುವರೆಸ ಲಾಗಿದ್ದು, ಮೈಸೂರು ದಸರಾಕ್ಕೆ ತೆರಳಿದ್ದ ಗೋಪಾಲಸ್ವಾಮಿಗೂ ಅಂಬಾರಿ ಹೊರುವ ತರಬೇತಿ ನೀಡಿ ಶ್ರೀರಂಗಪಟ್ಟಣಕ್ಕೆ ಕರೆದು ಕೊಂಡು ಹೋಗಿದ್ದು, ಮರದ ಅಂಬಾರಿ ಕೂರಿಸಿ ಗಣ್ಯರ ಬಳಿ ತೆರಳಿ ನಾಡದೇವತೆಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಪಟಾಕಿ ಮತ್ತು ವಾದ್ಯದ ಶಬ್ದಕ್ಕೆ ಬೆದರಿ ಹಿಂದಕ್ಕೆ ತೆರಳಿ ಆತಂಕದ ಪರಿಸ್ಥಿತಿ ಸೃಷ್ಟಿ ಮಾಡಿದೆ. ಈ ವೇಳೆ ಆನೆಯ ಬಳಿಯೇ ಇದ್ದ ಸಾರ್ವಜನಿಕರು ಬೆಚ್ಚಿ ಬಿದ್ದು ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಸಾಕಷ್ಟು ಜನಸಂದಣಿಯಿದ್ದ ಕಾರಣ ಸಂಭಾವ್ಯ ಅಪಾಯ ತಪ್ಪಿಸಲು ಗೋಪಾಲಸ್ವಾಮಿಯನ್ನು ಮಾವುತ ಮಂಜು ನಿಯಂತ್ರಿಸಲು ಯಶಸ್ವಿಯಾಗಿದ್ದು, ಜಂಬೂ ಸವಾರಿ ಮೊಟಕುಗೊಳಿಸಲಾಯಿತು.
-ಚಂದ್ರಮೋಹನ್