ಸೋಮವಾರಪೇಟೆ, ಅ.೭: ಇಲ್ಲಿನ ವೀರಶೈವ ಸಮಾಜ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಅಕ್ಕನಬಳಗ, ಬಸವೇಶ್ವರ ಯುವಕಸಂಘ ಇವರ ಆಶ್ರಯದಲ್ಲಿ ಬಸವೇಶ್ವರ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ನಡೆಯಲಿರುವ ಶರನ್ನವರಾತ್ರಿ ಉತ್ಸವಕ್ಕೆ ಸ್ಥಳೀಯ ಆನೆಕೆರೆಯಲ್ಲಿ ಗಂಗಾಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಇಲ್ಲಿನ ವಿರಕ್ತ ಮಠಾಧೀಶರಾದ ಶ್ರೀ ಮೋಕ್ಷಪತಿ ಸ್ವಾಮೀಜಿ, ದುಷ್ಟರಿಗೆ ಶಿಕ್ಷೆ, ಶಿಷ್ಟರಿಗೆ ರಕ್ಷಣೆ ನೀಡಲು ಅವತರಿಸಿದ ದೇವಿಯ ಆರಾಧನೆ ಮಾನವ ಕುಲಕ್ಕೆ ಸಿಕ್ಕ ಅಮೂಲ್ಯ ಅವಕಾಶ ಎಂದು ಬಣ್ಣಿಸಿದರು. ಭೂಮಿಯಲ್ಲಿ ದುಷ್ಟರ ತೊಂದರೆ ಹೆಚ್ಚಾದಾಗ ಅವತರಿಸಿದ ದೇವಿ, ದುಷ್ಟರನ್ನು ಸಂಹರಿಸಿ ಮಾನವರಿಗೆ ಶಾಂತಿ, ನೆಮ್ಮದಿ ಕರುಣಿಸಿದಳು. ಇಂದಿನ ಯುಗದಲ್ಲೂ ಕೂಡ ನಾವು ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.
ಆನೆಕೆರೆಯಲ್ಲಿ ಉತ್ಸವ ಮೂರ್ತಿಗೆ ಗಂಗಾ ಪೂಜೆ ನೆರವೇರಿಸಿದ ನಂತರ ದೇವಾಲಯದಲ್ಲಿ ಘಟಸ್ಥಾಪನೆ ಮಾಡಲಾಯಿತು. ಅರ್ಚಕ ಮಿಥುನ್ ಶಾಸ್ತಿç ಪುರೋಹಿತ್ವದಲ್ಲಿ ಗಣಪತಿ ಹೋಮ, ಪೂರ್ಣಾಹುತಿ ನಂತರ ದೇವಿಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭ ಸಮಾಜದ ಯಜಮಾನ ಶಿವಕುಮಾರ್, ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜು, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಸೇರಿದಂತೆ ಇತರರು ಹಾಜರಿದ್ದರು.