ಗೋಣಿಕೊಪ್ಪ ವರದಿ, ಅ.೮: ಕುಂದ, ಈಚೂರು ಗ್ರಾಮದಲ್ಲಿ ಥಾರ್ ಮಿಶ್ರಣ ಘಟಕ ನಿರ್ಮಿಸಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಘಟಕವನ್ನು ಸ್ಥಳಾಂತರಿಸುವAತೆ ಒತ್ತಾಯಿಸಿ ಕುಂದ ಗ್ರಾಮಸ್ಥರು ಹಾತೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

ಕುಂದ- ಬಿಶೆಟ್ಟಿಗೇರಿ ರಸ್ತೆಯಲ್ಲಿ ೨ ಥಾರ್ ಮಿಶ್ರಣ ಘಟಕ ಕಾರ್ಯನಿರ್ವಹಿಸುತ್ತಿದೆ. ರಾತ್ರಿ ಸೇರಿದಂತೆ ದಿನದ ೨೪ ಗಂಟೆ ಕಾರ್ಯನಿರ್ವಹಿಸುತ್ತಿದೆ. ಹೊಗೆಯಿಂದ ಸುತ್ತಲೂ ಮಾಲಿನ್ಯ ಹೆಚ್ಚಾಗಿದೆ. ಲಾರಿ ಓಡಾಟ ಹಗಲು-ರಾತ್ರಿ ಇರುವುದರಿಂದ ಹೆಚ್ಚು ಭಯ ಕಾಡುತ್ತಿದೆ. ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ತೆರಳಲು ಅಪಾಯ ಎದುರಿಸುವಂತಾಗಿದೆ. ೭ ತಿಂಗಳ ಹಿಂದೆಯಷ್ಟೆ ರಸ್ತೆ ಡಾಂಬರೀಕರಣ ಮಾಡಿದ್ದರೂ ಕೂಡ ಲಾರಿ ಓಡುವುದರಿಂದ ರಸ್ತೆ ಕಿತ್ತು ಬಂದಿದೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

೨ ಕಾಲೋನಿ ಸೇರಿದಂತೆ ಸುಮಾರು ೪೦೦ ಜನರು ಗ್ರಾಮದಲ್ಲಿ ಜೀವನ ಸಾಗಿಸುತ್ತಿದ್ದು, ಹೊಗೆಯಿಂದ ಕೃಷಿಗೂ ಕಂಠಕ ಎದುರಾಗುವ ಆತಂಕ ವ್ಯಕ್ತಪಡಿಸಿದರು. ಘಟಕ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.

ಹಾತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪ್ಪಂಡ ಗಿರಿ ಪೂವಣ್ಣ ಮನವಿ ಸ್ವೀಕರಿಸಿ, ಕಾನೂನು ಮೂಲಕ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಗುಮ್ಮಟ್ಟೀರ ದರ್ಶನ್, ಗ್ರಾಮಸ್ಥರಾದ ಪಟ್ರಂಗಡ ಶ್ರೀಮಂತ್, ಗುಮ್ಮಟ್ಟೀರ ಮುತ್ತಣ್ಣ, ಕೊಡಂದೇರ ಪವನ್, ತೀತಮಾಡ ವಾಸು, ಕಿಶನ್ ಸೇರಿದಂತೆ ಸುಮಾರು ೫೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.