ಮಡಿಕೇರಿ, ಅ. ೮: ಕೊಡಗು ಸೇವಾ ಕೇಂದ್ರದ ವತಿಯಿಂದ ನೆರೆಸಂತ್ರಸ್ತ ೧೦ ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸಲಾಯಿತು. ನಗರದ ಕೊಡವ ಸಮಾಜ ಕಟ್ಟಡದಲ್ಲಿರುವ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಲಾ ರೂ. ೬ ಸಾವಿರ ಮೌಲ್ಯದ ಸಿಲಿಂಡರ್, ಗ್ಯಾಸ್ ಸ್ಟೌವ್ ಮತ್ತು ಪರಿಕರಗಳನ್ನು ವಿತರಿಸಲಾಯಿತು.

ಸೇವಾ ಕೇಂದ್ರದ ಸಂಚಾಲಕ ತೇಲಪಂಡ ಪ್ರಮೋದ್ ಮಾತನಾಡಿ, ಪ್ರಾಕೃತಿಕ ವಿಕೋಪದಲ್ಲಿ ನಿರಾಶ್ರಿತರಾದ ಕುಟುಂಬಗಳನ್ನು ಗುರುತಿಸಿ ಅವರಲ್ಲಿ ಅಡುಗೆ ಅನಿಲ ಸಂಪರ್ಕ ರಹಿತರಿಗೆ ನೆರವು ನೀಡಲಾಗಿದೆ. ಕುಪ್ಪಂಡ ಪ್ರೇಮನಾಥ್ ಅವರು ವಿಪತ್ತು ತಡೆಯಲು ಲಾವಂಚ ಗಿಡಗಳನ್ನು ಕೊಡುಗೆಯಾಗಿ ನೀಡಿದ್ದರು. ಅದನ್ನು ಬೆಳೆಸಿ ಮಾರಾಟ ಮಾಡಿ ಬಂದ ಆದಾಯದಲ್ಲಿ ಅಡುಗೆ ಅನಿಲ ವಿತರಿಸಲಾಗಿದೆ. ಅಡುಗೆ ಅನಿಲ ವಿತರಿಸಲು ಸರಕಾರದ ಗಮನ ಸೆಳೆಯಲಾಗಿತ್ತು. ಸ್ಪಂದನ ದೊರಕದ ಹಿನ್ನೆಲೆ ಸೇವಾ ಕೇಂದ್ರದ ವತಿಯಿಂದ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಕೆಲಸಗಳನ್ನು ಮುಂದುವರೆಸಲಾಗುತ್ತದೆ. ದಾನಿಗಳ ಸಹಕಾರ ಮುಖ್ಯ ಎಂದರು.

ಕುಪ್ಪಂಡ ಪ್ರೇಮನಾಥ್ ಮಾತನಾಡಿ, ಕೊಡಗು ಸೇವಾ ಕೇಂದ್ರ ಉತ್ತಮ ಕೆಲಸ ಮಾಡಿದೆ. ಲಾವಂಚ ಗಿಡಗಳು ಭೂಕುಸಿತ ತಡೆಯಲು ಸಹಕಾರಿಯಾಗಿದ್ದು, ಇದನ್ನು ಅಪಾಯದ ಪ್ರದೇಶಗಳಲ್ಲಿ ಬೆಳೆಸಬೇಕೆಂದು ಕರೆ ನೀಡಿದರು. ಕಾಲೂರು, ಸೂರ್ಲಬ್ಬಿ, ಕಾಂಡನಕೊಲ್ಲಿ, ಮುಟ್ಲು ಸೇರಿದಂತೆ ಇನ್ನಿತರ ಭಾಗಗಳ ಫಲಾನುಭವಿಗಳು ಆಗಮಿಸಿ ಅಡುಗೆ ಅನಿಲ ಪಡೆದುಕೊಂಡರು. ಕೊಡಗು ಸೇವಾ ಕೇಂದ್ರದ ಸಂಚಾಲಕ ತಮ್ಮು ಪೂವಯ್ಯ ಈ ಸಂದರ್ಭ ಉಪಸ್ಥಿತರಿದ್ದರು.