*ಗೋಣಿಕೊಪ್ಪ, ಅ. ೭: ವರ್ತಕರ ವ್ಯಾಪಾರದ ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಪಟ್ಟಣದಲ್ಲಿ ಏಕಮುಖ ಸಂಚಾರವನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದ್ದು, ಈ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ಶಾಸಕ ಕೆ.ಜಿ. ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ಕೆವಿಕೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಮೂಲಕ ವರ್ತಕರು ಈ ಮನವಿಯನ್ನು ಶಾಸಕರಿಗೆ ಒಪ್ಪಿಸಿದರು.
ಏಕಮುಖ ಸಂಚಾರದಿAದ ಪಟ್ಟಣದ ಮುಖ್ಯ ಬೀದಿಗಳಲ್ಲಿ ವ್ಯಾಪಾರೀಕರಣ ತಾಂಡವವಾಡುತ್ತಿದೆ. ಹೀಗಾಗಿ ಇಲ್ಲಿನ ವ್ಯಾಪಾರಸ್ಥರು ಆರ್ಥಿಕತೆಯಿಂದ ಬಳಲುವ ಸ್ಥಿತಿ ಉದ್ಭವಿಸಿದೆ. ಬೈಪಾಸ್ ರಸ್ತೆಯಲ್ಲಿ ಮಾತ್ರ ವ್ಯಾಪಾರ ಹೆಚ್ಚಿನ ರೀತಿಯಲ್ಲಿ ನಡೆಯುತ್ತಿದೆ. ಗ್ರಾಹಕರಿಗೆ ವಾಹನದ ಸಂಚಾರಕ್ಕೆ ಮತ್ತು ವಾಹನ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೇ ಇರುವುದರಿಂದ ಮುಖ್ಯ ಬೀದಿಯಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಹೀಗಾಗಿ ಏಕ ಮುಖ ಸಂಚಾರವನ್ನು ರದ್ದುಗೊಳಿಸಬೇಕೆಂದು ವರ್ತಕರು ಮನವಿ ಮಾಡಿದರು.
ಗೋಣಿಕೊಪ್ಪ ಪಟ್ಟಣದ ಮುಖ್ಯ ರಸ್ತೆ ಬೀದಿಯ ಎರಡು ಬದಿಗಳಲ್ಲಿ ಸೂಕ್ತ ಚರಂÀಡಿ ವ್ಯವಸ್ಥೆ ಮತ್ತು ರಸ್ತೆಯ ಬದಿಗಳಲ್ಲಿ ಡಾಂಬರೀಕರಣ ಮತ್ತು ಫುಟ್ಪಾತ್ ವ್ಯವಸ್ಥೆ ನಿರ್ಮಿಸಿದರೆ ವಾಹನಗಳನ್ನು ಒಂದೆಡೆ ನಿಲ್ಲಿಸಲು ಸಾಧ್ಯವಾಗುತ್ತದೆ. ಖಾಸಗಿ ಕಟ್ಟಡ ಮತ್ತು ಕಾಂಪ್ಲೆಕ್ಸ್ಗಳಲ್ಲಿ÷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ಇದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗಾದಲ್ಲಿ ಏಕ ಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬಹುದಾಗಿದೆ ಎಂದು ಶಾಸಕರು ಸಲಹೆ ನೀಡಿದರು. ವಾಹನಗಳ ನಿಲ್ದಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಒಂದು ಗಂಟೆಯ ಮೇಲೆ ವಾಹನಗಳನ್ನು ನಿಲ್ಲಿಸಿದರೆ ವಾಹನ ಪಾರ್ಕಿಂಗ್ ತೆರಿಗೆ ಪಡೆದುಕೊಳ್ಳಲು ಗ್ರಾಮ ಪಂಚಾಯಿತಿ ಚಿಂತನೆ ಹರಿಸಬೇಕೆಂದು ಸೂಚಿಸಿದರು. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವರಿಗೆ ಮಳೆ ನಿಂತ ನಂತರ ಪಟ್ಟಣದ ರಸ್ತೆಯ ಎರಡು ಬದಿಗಳಲ್ಲಿ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವಂತೆ ಆದೇಶಿಸಿದ ಶಾಸಕರು ಡಾಂಬರೀಕರಣ ನಂತರ ಏಕಮುಖ ಸಂಚಾರ ಮತ್ತು ವಾಹನ ನಿಲುಗಡೆಯ ವ್ಯವಸ್ಥೆಗೆ ಪ್ರಾಯೋಗಿಕ ಪ್ರಯತ್ನಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ಜಿ.ಪಂ. ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಬಿ.ಎನ್. ಪ್ರಕಾಶ್, ಕುಲ್ಲಚಂಡ ಬೋಪಣ್ಣ, ಕುಲ್ಲಚಂಡ ಪ್ರಮೋದ್ ಗಣಪತಿ, ಗುಮ್ಮಟ್ಟೀರ ಕಿಲನ್ಗಣಪತಿ, ಗಣೇಶ್ರೈ, ಕಿರಿಯಮಾಡ ಅರುಣ್ಪೂಣಚ್ಚ, ಪೊನ್ನಿಮಾಡ ಸುರೇಶ್, ಚೇಂದAಡ ಸುಮಿ ಸುಬ್ಬಯ್ಯ ಸೇರಿದಂತೆ ಹಲವರು ಏಕಮುಖ ಸಂಚಾರ ತೆರವು ಮಾಡುವ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ಸಲಹೆಗಳನ್ನು ನೀಡಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ, ಬಗರ್ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ತಾಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಪೊಲೀಸ್ ಉಪವರಿಷ್ಠಾಧಿಕಾರಿ ಜಯಕುಮಾರ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ ರಾಮಕೃಷ್ಣ, ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.