ಕಣಿವೆ, ಅ. ೬ : ಇಲ್ಲಿಗೆ ಸಮೀಪದ ಗೊಂದಿಬಸವನಹಳ್ಳಿ ಗ್ರಾಮದ ಕೃಷಿಕರೊಬ್ಬರು ಸಾಕಿದ್ದ ಗೌರಿ ಎಂಬ ಹಸುವೊಂದು ಜನ್ಮ ನೀಡಿದ್ದ ಮೂರು ಹೆಣ್ಣು ಹಸುಳೆಗಳು ತಾವು ಅಮ್ಮನ ಹೊಟ್ಟೆಯಿಂದ ಪ್ರಸವಗೊಂಡ ಕೆಲವೇ ಹೊತ್ತಿನ ಬಳಿಕ ಅಸುನೀಗಿರುವ ಘಟನೆ ಮಹಾಲಯ ಅಮಾವಾಸ್ಯೆಯ ದಿನವಾದ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಗೊAದಿಬಸವನಹಳ್ಳಿ ಹೈನುಗಾರಿಕೆ ಕೃಷಿಕ ಜಯಶಂಕರ್ ಹಾಗೂ ಮಂಜುಳ ದಂಪತಿಗಳು ಸಾಕಿದ್ದಂತಹ ಅಮೇರಿಕನ್ ತಳಿಯ ಹಸುವೊಂದು ತನ್ನ ಮೊದಲ ಪ್ರಸವದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿತ್ತು.
ಆದರೆ ಪಶುವೈದ್ಯಕೀಯ ಸೇವೆ ಸಕಾಲದಲ್ಲಿ ದೊರಕದ ಕಾರಣ ಕೃಷಿಕ ಜಯಶಂಕರ್ ಕಳೆದ ಒಂದು ವರ್ಷದಿಂದ ಭಾರೀ ಜತನದಿಂದ ಸಲಹಿ ಆರೈಕೆ ಮಾಡಿದ್ದಂತಹ ಹಸು ‘ಗೌರಿ'ಗೆ ಜನಿಸಿದ ಹಸುಳೆಗಳು ಒಂದರ ಹಿಂದೆ ಒಂದು ಅಸು ನೀಗಿದ್ದನ್ನು ಕಂಡು ಮಮ್ಮಲ ಮರುಗಿದ್ದಾರೆ.
ಈ ಹಸು ಗೌರಿಯ ತಾಯಿ ಕಳೆದ ಮೂರು ವರ್ಷಗಳ ಹಿಂದೆ ಅಸು ನೀಗಿತ್ತು. ತಾಯಿಯ ಸಲುಗೆಯಲ್ಲಿ ಬೆಳೆಯುತ್ತಿದ್ದ ಈ ಗೌರಿ ಅನಾಥಳಾದಾಗ ಪಾಲಕರಾದ ಜಯಶಂಕರ್ ಹಾಗೂ ಮಂಜುಳ ಗೌರಿಯನ್ನು ತಮ್ಮ ಮಗಳಂತೆಯೇ ಜತನದಿಂದ ಆರೈಕೆ ಮಾಡಿ ಸಾಕಿ ಸಲಹಿದ್ದರು.
ಈ ಗೌರಿ ಯೌವ್ವನಾವಸ್ಥೆಗೆ ಬಂದುದನ್ನು ಕಂಡ ಪಾಲಕರು ಪಶು ಇಲಾಖೆಯ ಆರೋಗ್ಯ ನಿರೀಕ್ಷಕ ದಯಾನಂದ ಅವರ ಗಮನಕ್ಕೆ ತಂದಿದ್ದರು. ಅಮೇರಿಕನ್ ತಳಿಯಾದ ಈ ಗೌರಿ ದಷ್ಟ - ಪುಷ್ಟಳಾಗಿ ಬೆಳೆಯುತ್ತಿದ್ದುದನ್ನು ಕಂಡ ದಯಾನಂದ, ವಿಶೇಷ ತಳಿಯ ಹೋರಿಗಳಿಂದ ಸಂಗ್ರಹಿಸಿದ್ದ ವೀರ್ಯಾಣುವನ್ನು ನೀಡಿದ್ದರಿಂದ ಗರ್ಭ ಧರಿಸಿದ್ದ ಈ ಗೌರಿ ಆರೋಗ್ಯವಾಗಿದ್ದರಿಂದಲೇ ಒಂದರ ಹಿಂದೆ ಒಂದರAತೆ ಮೂರು ಹಸುಳೆಗಳಿಗೆ ಭಾರೀ ತ್ರಾಸಪಟ್ಟು ಜನ್ಮ ನೀಡಿದ್ದಳು. ನಾವು ತುಂಬಾ ಚೆನ್ನಾಗಿ ಆರೈಕೆ ಮಾಡಿದ್ದರಿಂದಲೇ ಪ್ರಯಾಸದ ಪ್ರಸವದ ನಂತರವೂ ಅರ್ಧ ಲಕ್ಷಕ್ಕೂ ಹೆಚ್ಚು ರೂ. ಗಳಿಗೆ ಬೆಲೆ ಬಾಳುವ ಗೌರಿ ಬದುಕುಳಿದಿದ್ದಾಳೆ. ಸದ್ಯ ನಾವು ಬದಿಕೊಂಡ್ವಿ ಎಂದು ನಿಟ್ಟುಸಿರು ಬಿಟ್ಟರು ಪಾಲಕಿ ಮಂಜುಳಾ.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ರೈತರು ಹೈನುಗಾರಿಕೆಯನ್ನು ಅವಲಂಬಿಸಿದ್ದರೂ ಕೂಡ ರಾಸುಗಳಿಗೆ ಪೂರಕವಾದ ಪಶುವೈದ್ಯರ ಸೇವೆ ನಮಗೆ ಸಕಾಲದಲ್ಲಿ ಲಭಿಸುತ್ತಿಲ್ಲ. ನಮ್ಮ ಗೌರಿ ಕರುಗಳಿಗೆ ಜನ್ಮ ನೀಡುವ ಸಂದರ್ಭ ವೈದ್ಯರು ಇದ್ದಿದ್ದಲ್ಲಿ ಕರುಗಳು ಬದುಕುಳಿಯುತ್ತಿದ್ದವು. ಅದರಲ್ಲೂ ಹೆಣ್ಣು ಜಾತಿಯ ಈ ಹಸುಳೆಗಳು ಅಂದರೆ ಗೋಪಾಲಕರಿಗೆ ಹೆಚ್ಚಿನ ಸಂತಸವಾಗುತ್ತದೆ.
ಹೆಣ್ಣು ಸಂತತಿ ಹುಟ್ಟಿದರೆ ಮನೆಯಲ್ಲಿ ಗೋಸಂತತಿ ವೃದ್ಧಿಯಾಗುತ್ತದೆ. ಆದರೆ ಗಂಡು ಜಾತಿ ಹುಟ್ಟಿದರೆ ಮೂಗು ಮುರಿಯುವ ಪಾಲಕರೇ ಹೆಚ್ಚು.
ಹಾಗಾಗಿ ಮೂರು ಹೆಣ್ಣು ಹಸುಳೆಗಳಿಗೆ ಜನ್ಮ ನೀಡಿದ ಕೆಲವೇ ಕ್ಷಣಗಳಲ್ಲಿ ಅವುಗಳನ್ನು ಕಳೆದುಕೊಂಡ ತಾಯಿ ‘ಗೌರಿ’ ಕಟ್ಟಿದ ಕೊಟ್ಟಿಗೆಯಲ್ಲಿ ಆಕಡೆ ಈಕಡೆ ಕಣ್ಣುಗಳನ್ನು ಹೊರಳಿಸಿ ನೋಡುತ್ತಾ ಒಂದೇ ಸಮನೆ ಘೀಳಿಡುತ್ತಿದ್ದ ಚಿತ್ರಣ ಮನಕಲಕುವಂತಿತ್ತು. ಅಸುನೀಗಿದ ಹಸುಳೆಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ ಗೋ ಪಾಲಕರಾದ ಜಯಶಂಕರ್ ದಂಪತಿಗಳು ಮನೆಯಲ್ಲಿ ಏನನ್ನೋ ಕಳೆದುಕೊಂಡ ಛಾಯೆಯಲ್ಲಿ ದಿನಗಳೆದರು. ತನ್ನ ಪ್ರಸವದ ಬಳಿಕ ತನ್ನ ಕೆಚ್ಚಲಲ್ಲಿನ ಗೀಬು ಹಾಲನ್ನು ತನ್ನ ಕರುಳ ಕುಡಿಗಳಿಗೆ ಕುಡಿಸಲು ಪರದಾಡುತ್ತಿದ್ದ ಹಸು ಗೌರಿ ಇಲ್ಲದ ಕಂದಮ್ಮಗಳಿಗಾಗಿ ಪರಿಪಾಟಲು ಪಡುತ್ತಿತ್ತು.
- ಕೆ.ಎಸ್. ಮೂರ್ತಿ