ಮಡಿಕೇರಿ, ಅ. ೬: ತಲಕಾವೇರಿಯಲ್ಲಿ ತಾ. ೧೭ ರಂದು ನಡೆಯುವ ತೀರ್ಥೋದ್ಭವದ ಸಂದರ್ಭ ಯಾವುದೇ ನಿರ್ಬಂಧಗಳನ್ನು ಹೇರದೆ ಕೊಡಗಿನ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ನೇತೃತ್ವದ ನಿಯೋಗ ಉಡುಪಿಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

ಇದಕ್ಕೆ ಸ್ಪಂದಿಸಿದ ಸಚಿವರು ತಲಾಕಾವೇರಿಯಲ್ಲಿ ಭಕ್ತರಿಗೆ ಮುಕ್ತ ಅವಕಾಶ ನೀಡುವ ಕುರಿತು ಚಿಂತನೆ ನಡೆಸಲಾಗಿದೆ. ಮಡಿಕೇರಿಯಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿ ಪೂರಕ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಕೊಡಗು, ಮಂಗಳೂರು, ಉಡುಪಿ ವಿಭಾಗದ ಬಿಜೆಪಿ ಪ್ರಭಾರಿ ಉಸ್ತುವಾರಿ ಉದಯಕುಮಾರ್ ಶೆಟ್ಟಿ, ಕೊಡಗಿನ ಪ್ರಮುಖರಾದ ಮಂಡಿರ ಅನು ಅಯ್ಯಣ್ಣ, ಮೂಡೆರ ರಾಯ್ ಕಾವೇರಪ್ಪ ಹಾಗೂ ಕುಲ್ಲೇಟಿರ ಅಜಿತ್ ನಾಣಯ್ಯ ಹಾಜರಿದ್ದರು.