ಮಡಿಕೇರಿ, ಅ. ೬: ಮಹಿಳೆಯಲ್ಲಿ ಉದ್ಯಮಶೀಲತೆಗೆ ಬೆಂಬಲ ನೀಡುವ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವಂತೆ ಇನ್ನರ್ ವೀಲ್ ಸಂಸ್ಥೆಯ ಜಿಲ್ಲಾ ಅಧ್ಯಕ್ಷೆ ಪುಷ್ಪ್ಪಾ ಗುರುರಾಜ್ ಕರೆ ನೀಡಿದ್ದಾರೆ.

ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪುಷ್ಪಾ ಗುರುರಾಜ್, ಇನ್ನರ್ ವೀಲ್ ಜಿಲ್ಲಾ ವ್ಯಾಪ್ತಿಯಲ್ಲಿ ೪೫ ಸಂಸ್ಥೆಗಳಿದ್ದು, ಪ್ರತಿಯೊಂದು ಸಂಸ್ಥೆಗಳೂ ತಲಾ ಓರ್ವ ಮಹಿಳೆಯ ಉದ್ಯಮಶೀಲತೆಗೆ ನೆರವು ನೀಡಿದರೂ ೪೫ ಕುಟುಂಬಗಳು ಸ್ವಾವಲಂಬಿ ಜೀವನ ಸಾಗಿಸಲು ಸಾಧ್ಯವಾಗಲಿದೆ. ಇಂತಹ ಯೋಜನೆಗೆ ಮಡಿಕೇರಿ ಇನ್ನರ್ ವೀಲ್ ಕೂಡ ಮುಂದಾಗುವAತೆ ಸೂಚಿಸಿದರು.

ಸಮಾಜಸೇವೆ ಎಂಬುದು ಮನಸ್ಸಿನಿಂದ ಬರಬೇಕೇ ವಿನಾ ಯಾರದ್ದೇ ಸೂಚನೆ, ಆದೇಶ ಅಥವಾ ಮಾರ್ಗದರ್ಶನದಿಂದ ಸಾಮಾಜಿಕ ಸೇವೆಗೆ ಮುಂದಾಗಬಾರದು.

ಇAತಹ ಸೇವೆಯಲ್ಲಿ ಆತ್ಮತೃಪ್ತಿ ದೊರಕಲಾರದು ಎಂದು ಅಭಿಪ್ರಾಯಪಟ್ಟ ಪುಷ್ಪಾ ಗುರುರಾಜ್, ಪುಣ್ಯ ಕಾರ್ಯಗಳು ಸದಾ ನಮ್ಮನ್ನು ಸುರಕ್ಷಿತವಾಗಿ ಕಾಯುತ್ತದೆ ಎಂಬ ಹಿರಿಯರ ಮಾತನ್ನು ನೆನಪಿಸಿಕೊಂಡು ಸಮಾಜದಲ್ಲಿ ಅಗತ್ಯವುಳ್ಳವರಿಗೆ ಸೇವಾ ಕಾರ್ಯದ ಮೂಲಕ ನೆರವಾಗುವಂತೆ ಸಲಹೆ ನೀಡಿದರು.

ಮಹಿಳೆಯರಿಗೆ ಶಿಕ್ಷಣ ನೀಡುವ ಕಾರ್ಯ ಆದ್ಯತೆಯಲ್ಲಿ ಆಗಬೇಕಾಗಿದ್ದು ಶಿಕ್ಷಿತ ಮಹಿಳೆಯಿಂದ ಕುಟುಂಬ ಮಾತ್ರವಲ್ಲದೇ ಸಮಾಜವೇ ಉತ್ತಮ ಹಾದಿಯಲ್ಲಿ ಸಾಗುತ್ತದೆ ಎಂದರು.

ಮಡಿಕೇರಿ ಇನ್ನರ್‌ವೀಲ್ ಅಧ್ಯಕ್ಷೆ ಶಫಾಲಿ ರೈ ಮಾತನಾಡಿ, ಈ ವರ್ಷ ಇನ್ನರ್‌ವೀಲ್‌ನಿಂದ ಅನೇಕ ಸಾಮಾಜಿಕ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದರು.

ಇನ್ನರ್‌ವೀಲ್ ಸಂಸ್ಥೆ ನಿರ್ದೇಶಕಿ ಲಲಿತಾ ರಾಘವನ್ ನೀಡಿದ ೧೦ ಸಾವಿರ ರೂ.ಗಳನ್ನು ಕಾಲೇಜು ವಿದ್ಯಾರ್ಥಿನಿ ಸ್ಫೂರ್ತಿ ಭಟ್ ಅವರಿಗೆ ಹಸ್ತಾಂತರಿಸಲಾಯಿತು.

ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ನಡಿಕೇರಿಯಂಡ ಅಚ್ಚಯ್ಯ ಇನ್ನರ್ ವೀಲ್ ವಾರ್ತಾ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಇನ್ನರ್ ವೀಲ್ ಕಾರ್ಯದರ್ಶಿ ಶಮ್ಮಿಪ್ರಭು, ಇನ್ನರ್ ವೀಲ್ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ರವಿ ವೇದಿಕೆಯಲ್ಲಿದ್ದರು. ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ವಲಯ ಕಾರ್ಯದರ್ಶಿ ಜಗದೀಶ್ ಪ್ರಶಾಂತ್, ಇನ್ನರ್ ವೀಲ್ ಸದಸ್ಯೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.