ನಾಪೋಕ್ಲು, ಅ. ೭: ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಹಾಗೂ ಮೊಬಿಯಸ್ ಫೌಂಡೇಶನ್ ಜಂಟಿ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಮನುಮುತ್ತಪ್ಪ ಚಾಲನೆ ನೀಡಿದರು
ನಾಪೋಕ್ಲು ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ವಿವಿಧ ಕುಟುಂಬಸ್ಥರು ಕೌಟುಂಬಿಕ ಹಾಕಿ ಪಂದ್ಯಾಟಗಳನ್ನು ನಡೆಸಿದ್ದಾರೆ. ಬಿದ್ದಾಟಂಡ ಕಪ್ ಹಾಕಿ ಹಾಗೂ ಕುಲ್ಲೇಟಿರ ಕಪ್ ಹಾಕಿ ಪಂದ್ಯಾಟದಲ್ಲಿ ಮೈದಾನವನ್ನು ಅಭಿವೃದ್ಧಿಪಡಿಸಲಾಗಿದ್ದು ಮೈದಾನವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದ ಅವರು ಕಳೆದ ವರ್ಷ ಅಪ್ಪಚೆಟ್ಟೋಳಂಡ ಕುಟುಂಬದ ವತಿಯಿಂದ ಕೌಟುಂಬಿಕ ಹಾಕಿ ಪಂದ್ಯಾಟವನ್ನು ನಡೆಸಬೇಕಾಗಿತ್ತು. ಆದರೆ, ಕೊರೊನಾ ಕಾರಣದಿಂದ ಅದನ್ನು ೨೦೨೩ಕ್ಕೆ ಮುಂದೂಡಲಾಗಿದೆ ಎಂದರು.
ಈ ಸಂದರ್ಭ ಅಪ್ಪಚಟ್ಟೋಳಂಡ ಕುಟುಂಬದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಪ್ಪಚಟ್ಟೋಳಂಡ ಈರಪ್ಪ, ಉಪಾಧ್ಯಕ್ಷ ಅಪ್ಪಚಟ್ಟೋಳಂಡ ಭೀಮಯ್ಯ, ಕಾರ್ಯದರ್ಶಿ ಅಪ್ಪಚಟ್ಟೋಳಂಡ ಮಿಥುನ್ ಮಾಚಯ್ಯ, ಖಜಾಂಚಿ ಅಪ್ಪಚಟ್ಟೋಳಂಡ ವಸಂತ್, ಕುಟುಂಬಸ್ಥರಾದ ಮೊಬಿಯಸ್ ಫೌಂಡೇಶನ್‌ನ ಮಣವಟ್ಟಿರ ಮಧು ಬೋಪಣ್ಣ, ಕರ್ನಲ್ ಸಂತೋಷ್, ಅಪ್ಪಚಟ್ಟೋಳಂಡ ನವೀನ್ ಅಪ್ಪಯ್ಯ, ಕಾಳಯ್ಯ, ರವಿ ಮೊಣ್ಣಪ್ಪ, ಕೆ.ಪಿ.ಎಸ್. ಶಾಲಾ ಪ್ರಾಂಶುಪಾಲೆ ಡಾ. ಅವನಿಜಾ ಸೋಮಯ್ಯ ಮತ್ತಿತರರು ಇದ್ದರು.