ಸುಂಟಿಕೊಪ್ಪ, ಅ. ೬: ಅಕ್ಟೋಬರ್ ತಿಂಗಳಿನಲ್ಲಿ ಸುರಿಯುತ್ತಿರುವ ವಿಪರೀತ ಅಕಾಲಿಕ ಮಳೆ ಒಂದೆಡೆಯಾದÀರೆ ಕಾಡು ಪ್ರಾಣಿಗಳು ಬೆಳೆದ ಬೆಳೆಯನ್ನು ಕಿತ್ತು ತಿನ್ನುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕೆದಕಲ್ ಗ್ರಾಮದಲ್ಲಿ ಬೆಳೆಗಾರ ಪುಲ್ಲೆರ ವಸಂತ್, ಪುಲ್ಲೇರ ಪೆಮ್ಮಯ್ಯ, ಪಿ.ಎಸ್. ತಿಮ್ಮಯ್ಯ, ಪಿ.ಎಸ್. ಬೋಪಯ್ಯ, ನಬೀಬ್ ತೋಟ, ಸತ್ಯ ಎಸ್ಟೇಟ್, ವೈ.ಪಿ. ತಿಮ್ಮಯ್ಯ, ಡಾ. ದೇವಯ್ಯ, ಕೊರನ ವಿಶ್ವನಾಥ್, ಬಾಳೆಕಾಡು, ಬೀಟಿಕಾಡು, ಮುಕ್ಕಾಟಿರ ತೋಟದಲ್ಲಿ ಕಾಡುಕೋಣ, ಕಾಡುಹಂದಿ, ಮಂಗಗಳ ಹಾವಳಿಯಿಂದ ಫಸಲು ನಾಶವಾಗುತ್ತಿದೆ. ೨೦೦ಕ್ಕೂ ಹೆಚ್ಚು ಮಂಗಗಳು ಕಾಫಿ ಗಿಡದ ರಕ್ಕೆಯನ್ನು ತುಂಡರಿಸಿ ದೂರಕ್ಕೆ ಕೊಂಡೊಯ್ದು ತಿನ್ನುತ್ತಿದೆ. ಕಾಡು ಹಂದಿಗಳು ನೆಟ್ಟ ಸಣ್ಣ ಕಾಫಿಗಿಡಗಳನ್ನು ನಾಶಪಡಿಸುತ್ತಿವೆ. ಬೆಣ್ಣೆ ಹಣ್ಣಿನ ಚಿಗುರನ್ನು, ತೆಂಗು, ಅಡಿಕೆ ಗಿಡಗಳ ಚಿಗುರನ್ನು ಕಾಡುಕೋಣಗಳು ತಿಂದು ನಾಶಪಡಿಸುತ್ತಿವೆ. ಅಲ್ಪಸ್ವಲ್ಪ ಇರುವ ಏಲಕ್ಕಿ ಗಿಡಗಳನ್ನು ಮಂಗಗಳು ಹಾಗೂ ಕಾಡು ಹಂದಿಗಳು ತಿಂದು ಹಾಕಿವೆ.
ಪುಲ್ಲೆರ ವಸಂತ ಅವರ ತೋಟದಲ್ಲಿ ೪೦೦ಕ್ಕೂ ಅಧಿಕ ಬೆಣ್ಣೆ ಹಣ್ಣು ಗಿಡಗಳನ್ನು ಬೆಳೆಸಲಾಗಿದ್ದು ಕಾಡುಕೋಣಗಳು ಗಿಡ ಚಿಗುರನ್ನು ತಿಂದು ಫಸಲು ಬಾರದಂತೆ ಮಾಡಿವೆ. ಈ ಅವಾಂತರದ ಬಗ್ಗೆ ಅರಣ್ಯ ಸಚಿವರಿಗೆ ಹಾಗೂ ಅರಣ್ಯ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಅರಣ್ಯ ಇಲಾಖೆ ಅವುಗಳನ್ನು ನಿಯಂತ್ರಿಸು ವುದು ಇರಲಿ ಇತ್ತ ತಿರುಗಿಯೂ ನೋಡಿಲ್ಲವೆಂದು ದೂರಿದ್ದಾರೆ.
ಕಾಫಿ ತೋಟದಲ್ಲಿ ಕಾಫಿ ಬೆಳೆ ಇನ್ನೇನು ಕೈಗೆಟ್ಟುಕುವ ಆಶಾಭಾವನೆಯಲ್ಲಿ ಇದ್ದಾಗಲೇ ವಿಪರೀತ ಮಳೆಯಿಂದ ಕಾಫಿ, ಕರಿಮೆಣಸು ನೆಲಕಚ್ಚಿದೆ. ಕಾಡುಪ್ರಾಣಿ ಹಾವಳಿಯಿಂದ ಇರುವ ಫಸಲು ಮನೆಗೆ ಸೇರದಂತಾಗಿದೆ. ಮುಂದಿನ ವರ್ಷ ಹೇಗೆ ಜೀವನ ಸರಿದೂಗಿಸುವುದು; ತೋಟಗಳ ಕೆಲಸ ನಿರ್ವಹಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ.
ವರದಿ: ಬಿ.ಡಿ. ರಾಜು ರೈ.