ಮಡಿಕೇರಿ, ಅ. ೬: ಕಾಡಿನಲ್ಲಿ ಆನೆ, ಹುಲಿಗಳ ಇರುವಿಕೆ ವ್ಯವಸ್ಥೆಯ ಆರೋಗ್ಯ ತೋರಿಸುತ್ತದೆ. ಇವುಗಳ ಅವನತಿ ವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗುತ್ತದೆ. ಆನೆಗಳ ರಕ್ಷಣೆಯೂ ಆಪತ್ತು ಕಾಲದ ವಿಮೆಯಾಗಿರಲಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಕಾರಿ ವಿಜಯಕುಮಾರ್ ಗೋಗಿ ಅಭಿಪ್ರಾಯಪಟ್ಟರು.

ಮುಕ್ತ ಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಸೋಮವಾರ ಮುಕ್ತ ವಿವಿ, ಅರಣ್ಯ ಇಲಾಖೆ, ವೈಲ್ಡ್ಲೈಫ್ ಕನ್ಸರ್‌ವೇಷನ ಫೌಂಡೇಷನ್ ಮತ್ತು ಅಕ್ಷರ ಮಂಟಪ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ ನಾಲ್ಕು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ಆನೆಗಳು ಕರುನಾಡಿನ ಸಂಸ್ಕೃತಿ ಭಾಗವಾಗಿವೆ. ಅವುಗಳ ಉಳಿವಿನಲ್ಲಿ ಕರ್ನಾಟಕದ ಸಮೃದ್ಧಿ ಇರುತ್ತೆ. ಅಳಿವಿನಲ್ಲಿ ಪ್ರವಾಹ, ಬರಗಾಲ, ವೈಪರೀತ್ಯಗಳು ಹೆಚ್ಚಲಿವೆ. ಕಾಡಿನಲ್ಲಿ ಆನೆ, ಹುಲಿಗಳ ಇರುವಿಕೆ ವ್ಯವಸ್ಥೆಯ ಆರೋಗ್ಯ ತೋರಿಸುತ್ತದೆ. ಇವು ಭವಿಷ್ಯದ ಬೇಡಿಕೆ ಪೂರೈಸುವ ಜೈವಿಕ ಭಂಡಾರ. ಇವುಗಳು ಅವನತಿಯಾದರೆ ವ್ಯವಸ್ಥೆಯಲ್ಲಿ ಸಮತೋಲನ ತಪ್ಪುತ್ತದೆ. ಆನೆಗಳ ರಕ್ಷಣೆಯೂ ಆಪತ್ತು ಕಾಲದ ವಿಮೆಯಾಗಿರಲಿದೆ ಎಂದರು.

ಸAಸ್ಕೃತಿ ಭಾಗವಾಗಿ ಆನೆ ಸೇರಿಕೊಂಡಿದೆ. ಆನೆ ಬಿಟ್ಟು ಊಹಿಸಲೂ ಸಾಧ್ಯವಿಲ್ಲ. ಸಾಹಿತ್ಯ, ಚಿತ್ರಕಲೆ, ಶಿಲ್ಪಕಲೆಯಲ್ಲಿ ಪ್ರಾಧನ್ಯತೆ ಪಡೆದಿದೆ. ದಸರಾ ಉತ್ಸವ, ಕೆಲವು ಧಾರ್ಮಿಕ ಕೈಂಕರ್ಯಗಳಿಗೆ ಆನೆ ಬೇಕೇಬೇಕು. ಹೀಗೆ ಬದುಕಿನ ಅವಿಭಾಜ್ಯವಾಗಿರುವ ಆನೆಗಳ ಇಂದಿನ ಸ್ಥಿತಿ ಏನಾಗಿದೆ? ಆಲೋಚಿಸಬೇಕಿದೆ.

ಹಿಂದೆ ಆನೆ ಶಕ್ತಿಯ ಸಂಕೇತವಾಗಿತ್ತು. ಹೆಚ್ಚು ಆನೆಗಳ ಹೊಂದಿದ ರಾಜ ಯುದ್ಧದಲ್ಲಿ ಗೆಲುವು ಪಡೆಯುತ್ತಿದ್ದ. ಉದಾಃ ಮಗಧ ರಾಜ ೩೬ ಸಾವಿರ, ಮೊಘಲರ ಆಳ್ವಿಕೆಯಲ್ಲಿ ೧ ಲಕ್ಷ ಆನೆಗಳಿದ್ದವಂತೆ. ಇವು ಆಳುವವರ ಶಕ್ತಿಯಾಗಿದ್ದವು. ಇವತ್ತು ಇಡೀ ದೇಶದಲ್ಲಿ ಒಂದು ಸಂಸ್ಥಾನದಲ್ಲಿದ್ದಷ್ಟು ಆನೆಯೂ ಇಲ್ಲ ಎಂದರು.

ಅಕ್ಷರದ ಬಗ್ಗೆ ಕೆಲವರಿಗೆ ಮಧುಮೇಹ. ಇನ್ನೂ ಕೆಲವರಿಗೆ ಓದುವುದು ಬಿಪಿ ಹೆಚ್ಚಿಸುತ್ತದೆ. ಅಕ್ಷರ ಆಸಕ್ತರು ಐತಿಚಂಡ ರಮೇಶ್ ಉತ್ತಪ್ಪ ಅವರ ಆನೆಗಳ ಕುರಿತಾದ ಕೃತಿಗಳನ್ನು ಓದಿ ಆನಂದಿಸಬೇಕು. ಬರಹಗಾರರು ಆನೆಗಳ ಕುರಿತು ಹೆಚ್ಚು ಬರೆದು ಅರಿವು ಮೂಡಿಸಬೇಕು. ಉತ್ತಪ್ಪ ಅವರು ಮಾವುತರು, ಕಾವಾಡಿಗಳ ಬದುಕಿನ ಕುರಿತು ಬರೆಯಬೇಕು ಎಂದು ಸಲಹೆ ನೀಡಿದರು.

ಆನೆಗಳ ಬಗ್ಗೆ ಸಾಕಷ್ಟು ಕೃತಿಗಳು ಬರುತ್ತಲೆ ಇವೆ. ಆನೆ ಮಾವುತರು ಮತ್ತು ಕಾವಾಡಿಗಳ ಬಗ್ಗೆಯೂ ಪುಸ್ತಕ ಬರಲಿ ಎಂದು ಆಶಿಸಿದರು. ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನೋದ್‌ಕುಮಾರ್ ನಾಯ್ಕ ಮಾತನಾಡಿ, ಐತಿಚಂಡ ರಮೇಶ್ ಉತ್ತಪ್ಪರ ನಾಲ್ಕು ಕೃತಿಗಳು ವನ್ಯಲೋಕದ ಅಪರೂಪದ ಮನೋವಿಜ್ಞಾನವಾಗಿವೆ. ವನ್ಯಜೀವಿ ಆಸಕ್ತರಿಗೆ ಅಧ್ಯಯನ ಯೋಗ್ಯ ಕೃತಿಗಳಾಗಿವೆ. ಕುಶಾ ಕೀ ಕಹಾನಿಯಲ್ಲಿ ಹೆಣ್ಣಾನೆ ವಿರಹ ವೇದನೆ ಇದೆ. ಪುಸ್ತಕದಲ್ಲಿ ಅಪರೂಪದ ಸನ್ನಿವೇಶಗಳಿವೆ. ಆನೆಯೊಂದಿಗೆ ಆಪ್ತ ಬಾಂಧವ್ಯ ಹೊಂದಿರುವ ಜೇನು ಕುರುಬರ ಬಗ್ಗೆ ಬರೆಯಬೇಕಿತ್ತು ಎಂದು ತಿಳಿಸಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮಾತನಾಡಿದರು. ಇದೇ ವೇಳೆ ಅಭಿಮನ್ಯು ಆನೆ ಮಾವುತ ವಸಂತ, ಪತ್ರಿಕಾ ಛಾಯಾಗ್ರಾಹಕ ನಾಗೇಶ್ ಪಾಣತ್ತಲೆ ಅವರನ್ನು ಅಭಿನಂದಿಸಲಾಯಿತು.

ಮುಕ್ತ ವಿವಿ ಕುಲಸಚಿವ ಪ್ರೊ. ಆರ್. ರಾಜಣ್ಣ ಸಮಾರಂಭ ಉದ್ಘಾಟಿಸಿದರು. ರಾಜಕುಮಾರ್ ದೇವರಾಜೇ ಅರಸ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಜಗತ್‌ರಾಮ್, ಮೃಗಾಲಯದ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಅನುವಾದಕಿ ಕೆ.ಆರ್. ಪ್ರೇಮಲತಾ, ಪ್ರಕಾಶಕ ಚೇತನ್ ಕಣಬೂರು ಇತರರು ಇದ್ದರು.

ಕಾರ್ಯಕ್ರಮದಲ್ಲಿ ಆನೆಲೋಕದ ವಿಸ್ಮಯ, ದಿ ಟಾಕಿಂಗ್ ಎಲಿಫೆಂಟ್(ಇAಗ್ಲಿಷ್ ಅನುವಾದ), ಅಭಿಮನ್ಯು -ದಿ ಗ್ರೇಟ್, ಕುಶಾ ಕೀ ಕಹಾನಿ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.