ಮಡಿಕೇರಿ ಅ.೪ : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾ ಸಮಿತಿ ಸೇರಿದಂತೆ ತುಳು ಭಾಷಿಕ ಪ್ರಮುಖರ ಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂಟದ ಜಿಲ್ಲಾಧ್ಯಕ್ಷ ಬಿ.ಬಿ.ಐತ್ತಪ್ಪ ರೈ, ಜಿಲ್ಲೆಯ ೧೩ ತುಳು ಭಾಷಿಕ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಸಂಘಟಿತರನ್ನಾಗಿ ಮಾಡಿ, ಭಾಷೆಯ ಬೆಳವಣಿಗೆಗೆ ಒತ್ತು ನೀಡಲಾಗುವುದು. ತುಳು ಭಾಷಿಕರು ಎಲ್ಲಾ ಕ್ಷೇತ್ರದಲ್ಲೂ ಬೆಳವಣಿಗೆ ಸಾಧಿಸಲು ಕೂಟ ಸಂಪೂರ್ಣ ಸಹಕಾರ ನೀಡಲಿದೆ. ಸಂಘಟನೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಚಿಂತಿಸಲಾಗಿದ್ದು, ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಉಪಾಧ್ಯಕ್ಷ ಬಿ.ವೈ.ಆನಂದ ರಘು ಮಾತನಾಡಿ, ತುಳು ಭಾಷಿಕರ ಸಂಘ ಎಲ್ಲಾ ರೀತಿಯಲ್ಲು ಸದೃಢವಾಗಿದ್ದು, ತುಳು ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸಲಿದೆ ಎಂದರು.
ತುಳು ಭಾಷಿಕರ ಶ್ರೇಯೋಭಿವೃದ್ಧಿಗೆ ಸಂಘವನ್ನು ಗ್ರಾಮ, ಹೋಬಳಿ ಮಟ್ಟದಲ್ಲಿ ಸಂಘಟನೆ ಮಾಡಬೇಕು ಮತ್ತು ಎಲ್ಲಾ ೧೩ ಸಮುದಾಯವನ್ನು ಸಮಾನವಾಗಿ ಪರಿಗಣಿಸಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮಾತನಾಡಿ, ತುಳುವೆರ ಜನಪದ ಕೂಟ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಮುಂದಿನ ತಿಂಗಳು ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ತುಳು ಭಾಷಿಕ ಬಾಂಧವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು.
ಗೌರವಾಧ್ಯಕ್ಷ ಶೇಖರ್ ಭಂಡಾರಿ ಹಾಗೂ ಜಿಲ್ಲಾ ಗೌರವ ಸಲಹೆಗಾರ ಬಾಲಕೃಷ್ಣ ರೈ ಸಂಘಟನೆಯ ಕುರಿತು ಮಾತನಾಡಿದರು.
ಪದಾಧಿಕಾರಿಗಳ ಆಯ್ಕೆ
ಸಭೆಯಲ್ಲಿ ಪಿ.ಎಂ.ರವಿ ಅವರನ್ನು ಎರಡನೇ ಬಾರಿಗೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಅವಿರೋಧ ವಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಗಳನ್ನಾಗಿ ಸತೀಶ್ ಕುಂದರ್ ಹಾಗೂ ಬಿ.ಎಸ್.ಆನಂದ್ ಅವರನ್ನು ನೇಮಕ ಮಾಡಲಾಯಿತು. ಜಿಲ್ಲಾ ಖಜಾಂಚಿಯಾಗಿ ಪ್ರಭುರೈ, ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾಗಿ ವಿಜಯಲಕ್ಷಿö್ಮ ರವಿಶೆಟ್ಟಿ ಹಾಗೂ ಜಿಲ್ಲಾ ಉಪಾಧ್ಯಕ್ಷರಾಗಿ ರಾಮಕೃಷ್ಣ ಹೆಬ್ಬಾರ್ ಆಯ್ಕೆಯಾದರು.
ತಾಲೂಕು ಘಟಕದ ಅಧ್ಯಕ್ಷರಾಗಿ ಎಂ.ಡಿ. ಸುರೇಶ್, ಸಂಚಾಲಕರಾಗಿ ಪ್ರಸಾದ್ ಬಿಳಿಗೇರಿ ನೇಮಕಗೊಂಡರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಗಿ ರಾಜೀವ್ ಸುಲೋಚನ ಹಾಗೂ ಮಡಿಕೇರಿ ನಗರ ಘಟಕದ ಅಧ್ಯಕ್ಷರನ್ನಾಗಿ ಅರುಣ್ ಶೆಟ್ಟಿ ಅವರನ್ನು ನೇಮಕಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.