ಸೋಮವಾರಪೇಟೆ, ಅ. ೫: ತಾಲೂಕಿನ ಕುಗ್ರಾಮಗಳ ಸಾಲಿನಲ್ಲಿ ಮುನ್ನೆಲೆಯಲ್ಲಿದ್ದ ತಡ್ಡಿಕೊಪ್ಪ ಗ್ರಾಮಕ್ಕೆ ಕೊನೆಗೂ ಸೇತುವೆಯ ಭಾಗ್ಯ ಲಭಿಸಿದ್ದು, ಈ ಭಾಗದ ಸಾರ್ವಜನಿಕರ ದಶಕಗಳ ಕನಸು ನನಸಾಗಿದೆ.
ತಡ್ಡಿಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಕಾಲು ಸೇತುವೆ ಅತಿವೃಷ್ಟಿಗೆ ಸಿಲುಕಿ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಮಳೆಗಾಲದಲ್ಲಿ ತಡ್ಡಿಕೊಪ್ಪದ ಗ್ರಾಮಸ್ಥರು ಹೊರ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಳ್ಳುತ್ತಿದ್ದರು.
ಅಂತಹ ಅನಿವಾರ್ಯ ಸಂದರ್ಭ ಮರಗಳಿಗೆ ಹಗ್ಗ ಬಿಗಿದು ಸೇತುವೆಗಳನ್ನು ನಿರ್ಮಿಸಿಕೊಂಡು, ಅದರಲ್ಲೇ ಜೋತುಕೊಂಡು ಈಚೆ ಬದಿ ಬರುತ್ತಿದ್ದರು. ಇದೀಗ ಮಳೆಹಾನಿ ಪರಿಹಾರ ನಿಧಿಯಡಿ ರೂ. ೪೦ ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದ ಮೂಲಕ ಸೇತುವೆ ನಿರ್ಮಿಸಲಾಗಿದ್ದು, ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ನೂತನ ಸೇತುವೆಯನ್ನು ಉದ್ಘಾಟಿಸಿದರು.
ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕೊತ್ನಳ್ಳಿ-ಕುಂಬ್ರಕೋಡಿ-ತಡ್ಡಿಕೊಪ್ಪ ಸೇತುವೆ ನಿರ್ಮಾಣದಿಂದ ಹೊಳೆಯ ಆಚೆ ಬದಿಯಲ್ಲಿರುವ ೮ ಕುಟುಂಬಗಳೂ ಸೇರಿದಂತೆ ಸಾವಿರಾರು ಏಕರೆ ಕೃಷಿ ಪ್ರದೇಶಕ್ಕೆ ದಾರಿ ನಿರ್ಮಾಣವಾದಂತಾಗಿದೆ.
ಈ ಮೊದಲು ಮಳೆಗಾಲ ಸಂದರ್ಭ ಕೃಷಿ ಭೂಮಿಗೆ ಹೋಗಲೂ ಸಾಧ್ಯವಾಗುತ್ತಿರಲಿಲ್ಲ. ಇದೀಗ ನೂತನ ಸೇತುವೆ ನಿರ್ಮಾಣದಿಂದ ಎಲ್ಲಾ ಸಮಯದಲ್ಲೂ ಕೃಷಿ ಕಾರ್ಯಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದ್ದು, ಗ್ರಾಮಸ್ಥರಲ್ಲಿ ನೆಮ್ಮದಿಯ ಭಾವ ಮೂಡಿದೆ. ಆದರೂ ಸುಸಜ್ಜಿತ ರಸ್ತೆಯ ಕೊರತೆ ಗ್ರಾಮಸ್ಥರನ್ನು ಕಾಡುತ್ತಿದೆ.
ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಂಜನ್, ಕುಗ್ರಾಮಗಳಿಗೂ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜೀ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಮಾಜೀ ಸದಸ್ಯ ದೀಪಕ್, ತಾ.ಪಂ. ಮಾಜೀ ಸದಸ್ಯ ಧರ್ಮಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.