*ಗೋಣಿಕೊಪ್ಪ, ಅ. ೫: ಕೊಡವ ಜನಾಂಗ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವಂತೆ ಕೋರಿ ಶಾಸಕ ಕೆ.ಜಿ ಬೋಪಯ್ಯ ಅವರಿಗೆ ಯೂಕೊ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದಲ್ಲಿ ಶಾಸಕರನ್ನು ಭೇಟಿ ಮಾಡಿದ ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ನೇತೃತ್ವದ ತಂಡ ಕೊಡಗಿನ ಪ್ರಮುಖ ಮೂಲ ನಿವಾಸಿಗಳಾದ ಕೊಡವ ಜನಾಂಗದ ಸಮಗ್ರ ಶ್ರೇಯೋಭಿವೃದ್ಧಿಗೆ ನೂತನವಾಗಿ ಕೊಡವ ಜನಾಂಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಪೂರ್ವಕ ಮನವಿಯನ್ನು ಶಾಸಕರ ಮೂಲಕ ಸಲ್ಲಿಸಲಾಯಿತು.
ಸರ್ಕಾರ ಈಗಾಗಲೇ ವೀರಶೈವ, ಲಿಂಗಾಯಿತ, ಒಕ್ಕಲಿಗ, ಮರಾಠ ಸಮುದಾಯಗಳಿಗೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದೆ. ಅದೇ ರೀತಿಯಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ ೩ಎ ಅಡಿಯಲ್ಲಿ ಗುರುತಿಸಿಕೊಂಡ ಕೊಡವ ಜನಾಂಗದ ಅಭಿವೃದ್ಧಿಗೆ ನಿಗಮ ಸ್ಥಾಪಿಸುವುದು ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಜನಾಂಗದ ಶ್ರೇಯೋಭಿವೃದ್ಧಿಗೆ ಚಿಂತನೆ ಹರಿಸಬೇಕೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೊಡವ ಜನಾಂಗದ ಅಭಿವೃದ್ಧಿಗಾಗಿ ಪ್ರತ್ಯೇಕ ಕೊಡವ ಜನಾಂಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕೆಂದು ಮನವಿ ಮಾಡಲಾಯಿತು. ಈ ಸಂದರ್ಭ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪುö್ಪಡೀರ ಸುಜು ಕರುಂಬಯ್ಯ, ಕಾಟಿಮಾಡ ಗಿರಿಅಯ್ಯಪ್ಪ, ನೆಲ್ಲಮಕ್ಕಡ ಜಫ್ರಿ ಮಾದಯ್ಯ, ಮಚ್ಚಮಾಡ ಅನೀಶ್ ಮಾದಪ್ಪ, ಅಜ್ಜನಿಕಂಡ ತಿಮ್ಮಯ್ಯ, ಕೊಣಿಯಂಡ ಸಂಜುಸೋಮಯ್ಯ, ಬೊಳಿಯಂಗಡ ಬೋಪಣ್ಣ, ಮಚ್ಚಮಾಡ ರಮೇಶ್, ಮದ್ರಿರ ಪ್ರಿನ್ಸ್ ಇದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ತಮ್ಮದೇ ಆದ ಆಚಾರ, ವಿಚಾರವನ್ನು ಹೊಂದಿರುವ ಕೊಡವ ಸಮುದಾಯ ಪ್ರಪಂಚದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮದ ಬೇಡಿಕೆ ಸಮಂಜಸವಾಗಿದೆ ಮತ್ತು ಸೂಕ್ತವಾಗಿದೆ. ಹಿಂದುಳಿದ ಅನೇಕ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಸರ್ಕಾರ ಕೊಡವ ಜನಾಂಗಕ್ಕೂ ಪ್ರತ್ಯೇಕ ನಿಗಮ ತರುವುದು ಉತ್ತಮ ಬೆಳವಣಿಗೆ. ಬೇಡಿಕೆಯ ಮನವಿ ಪತ್ರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಗೆ ಪ್ರಮಾಣಿಕ ಪ್ರಯತ್ನ ನಡೆಸುತ್ತೇನೆ. ಅಲ್ಲದೇ ಸಂಘಟನೆಯ ಪದಾಧಿಕಾರಿಗಳನ್ನು ನೇರವಾಗಿ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸಿ ಮನವಿ ಮತ್ತು ಒತ್ತಾಯವನ್ನು ಸರ್ಕಾರ ಪುರಸ್ಕರಿಸುವ ಕಾರ್ಯಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದರು. ಜಿ.ಪಂ. ಮಾಜಿ ಸದಸ್ಯ ಚಿಯಕ್‌ಪೂವಂಡ ಬೋಪಣ್ಣ, ಆರ್.ಎಂ.ಸಿ. ಸದಸ್ಯ ಗುಮ್ಮಟೀರ ಕಿಲನ್‌ಗಣಪತಿ ಉಪಸ್ಥಿತರಿದ್ದರು.