ಸೋಮವಾರಪೇಟೆ, ಅ. ೩: ಗುಡುಗಳಲೆ-ಮಧ್ಯಪೇಟೆ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಸಮೀಪವೇ ಶನಿವಾರಸಂತೆ ವ್ಯಾಪ್ತಿಯ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಇದರಿಂದಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರಸಂತೆ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಬಳಿ ಪಟ್ಟಣದ ಕಸವನ್ನು ಸುರಿಯುತ್ತಿರುವುದರಿಂದ ಇಡೀ ವಾತಾವರಣ ಗಬ್ಬೆದ್ದು ನಾರುತ್ತಿದೆ. ಈ ಪ್ರದೇಶದಲ್ಲಿ ತ್ಯಾಜ್ಯದ ಶೇಖರಣೆ ಜಾಸ್ತಿಯಾದರೆ ಜೆಸಿಬಿ ಮೂಲಕ ಪಕ್ಕದ ಹೊಳೆಗೆ ತಳ್ಳಲಾಗುತ್ತಿದೆ. ಇದರಿಂದಾಗಿ ಹೊಳೆಯ ನೀರು ಕಲುಷಿತವಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಇಂದ್ರೇಶ್ ಆರೋಪಿಸಿದ್ದಾರೆ.
ಶನಿವಾರಸಂತೆ ಗ್ರಾಮ ಪಂಚಾಯಿತಿ ಹಲವಾರು ವರ್ಷಗಳಿಂದ ಪಟ್ಟಣದ ತ್ಯಾಜ್ಯವನ್ನು ರಾಜ್ಯ ಹೆದ್ದಾರಿ ಪಕ್ಕದ ಹೊಳೆಯ ದಡದಲ್ಲಿ ಸುರಿಯುತ್ತಿದೆ. ಹಲವಾರು ವರ್ಷಗಳಿಂದ ತ್ಯಾಜ್ಯ ಮತ್ತು ಮಲೀನ ನೀರು ಹೊಳೆಗೆ ಸೇರುತ್ತಿದ್ದು, ಈ ನೀರು ಹೇಮಾವತಿ ನದಿ ಮೂಲಕ ಗೊರೂರು ಡ್ಯಾಂಗೆ ಹರಿಯುತ್ತಿದೆ. ಇದರಿಂದ ಜಲಚರಗಳಿಗೆ ಹಾನಿಯಾಗಿದೆ. ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ ಎಂದು ಇಂದ್ರೇಶ್ ದೂರಿದ್ದಾರೆ.
ತ್ಯಾಜ್ಯ ಸಂಗ್ರಹವಾಗಿರುವ ಪಕ್ಕದಲ್ಲೇ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು ಇದೆ. ಆದರೂ ಪಂಚಾಯಿತಿಗೆ ವೈಜ್ಞಾನಿಕ ಕಸವಿಲೇವಾರಿ ಘಟಕ ಇಲ್ಲದಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಕಸ ವಿಲೇವಾರಿಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.