*ಗೋಣಿಕೊಪ್ಪಲು, ಅ. ೩: ೬೭ನೇ ವನ್ಯಜೀವಿ ಸಪ್ತಾಹ ಆಚರಣೆ ಅಂಗವಾಗಿ ರೂ. ೯ ಲಕ್ಷ ಅನುದಾನದಲ್ಲಿ ನಿರ್ಮಾಣವಾದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಾಣಚ್ಚಿ ತನಿಖೆ ಠಾಣೆ ಮತ್ತು ಮುಖ್ಯ ದ್ವಾರದ ಉದ್ಘಾಟನೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು.
ಕಾಡಿನ ಒಳಗೆ ಅಕ್ರಮ ಪ್ರವೇಶ ಮಾಡದಂತೆ ಮತ್ತು ಕಾಡು ಮತ್ತು ಪ್ರಾಣಿಗಳ ರಕ್ಷಣೆಗಾಗಿ ನೂತನ ಭದ್ರತಾ ದ್ವಾರವನ್ನು ನಿರ್ಮಿಸಲಾಗಿದೆ. ಇದರಿಂದ ಕಾಡಿಗೆ ಅಕ್ರಮ ಪ್ರವೇಶಿಸುವವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಕಾರಣ ಅರಣ್ಯ ಇಲಾಖೆ ದ್ವಾರಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲನ್ನು ಇಟ್ಟು ಭದ್ರತೆ ವ್ಯವಸ್ಥೆಗೆ ಮುಂದಾಗಿದೆ ಎಂದು ಶಾಸಕರು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಗರಹೊಳೆ ವೀಕ್ಷಣೆಗೆ ಆಗಮಿಸುವವರಿಗೆ ಅನುಕೂಲ ಮಾಡುವ ಉದ್ದೇಶದಿಂದ ಎರಡು ನೂತನ ಸಫಾರಿ ಟೆಂಪೋ ಟ್ಯಾಕ್ಸಿಯ ಸಂಚಾರಕ್ಕೆ ಶಾಸಕರು ತಾವೇ ಸ್ವತಃ ಟೆಂಪೋ ಟ್ಯಾಕ್ಸಿಯಲ್ಲಿ ಕುಳಿತು ಸಫಾರಿ ವೀಕ್ಷಣೆ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶದಿಂದ ನಾಗರಹೊಳೆ ವನ್ಯ ಜೀವಿ ವಲಯದ ಮೂಲಕ ಮದುಮಲೈ ಅರಣ್ಯ ವ್ಯಾಪ್ತಿಗೆ ಸಂಚರಿಸುವ ಹುಲಿ ಸಂರಕ್ಷಿತ ಜಾಗೃತಿ ವಾಹನ ಸಂಚಾರದ ತಂಡವನ್ನು ಶಾಸಕರು ಹಾಗೂ ಅರಣ್ಯಾಧಿಕಾರಿಗಳು ಬೀಳ್ಕೊಟ್ಟರು.
ಮರಗಿಡಗಳನ್ನು ಯಥೇಚ್ಚವಾಗಿ ನೆಡುವ ಮೂಲಕ ಅರಣ್ಯಗಳನ್ನು ಮತ್ತಷ್ಟು ಸಂವೃದ್ದಿಗೊಳಿಸುವ ಕಾರ್ಯ ನಡೆಯಬೇಕಾಗಿದೆ ಎಂಬ ನಿಟ್ಟಿನಲ್ಲಿ ಶಾಸಕರು ಯಥೇಚ್ಚವಾಗಿ ಪಕ್ಷಿಗಳನ್ನು ಆಕರ್ಷಿಸುವ ಗೋಳಿ ಗಿಡವನ್ನು ನೆಟ್ಟರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು ಆಲದ ಗಿಡವನ್ನು ನೆಟ್ಟು ಪರಿಸರ ಜಾಗೃತಿಗೆ ಕರೆನೀಡಿದರು.
ಈ ಸಂದರ್ಭದಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕ ಡಿ. ಮಹೇಶ್ ಕುಮಾರ್, ನಾಗರಹೊಳೆ ವನ್ಯ ಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ. ಗೋಪಾಲ್, ಹುಣಸೂರು ಅರಣ್ಯ ವ್ಯಾಪ್ತಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್, ನಾಗರಹೊಳೆ ವಲಯ ಅರಣ್ಯಾಧಿಕಾರಿ ಗಿರೀಶ್, ಮತ್ತಿಗೋಡು ವಲಯ ಅರಣ್ಯಾಧಿಕಾರಿ ಕಿರಣ್, ತಮಿಳುನಾಡು ವ್ಯಾಪ್ತಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾದೈ, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.
- ಎನ್.ಎನ್. ದಿನೇಶ್