ಮಡಿಕೇರಿ, ಸೆ. ೩: ಕೊಡಗು ಜಿಲ್ಲೆಯಲ್ಲಿ ಶನಿವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಅಲ್ಲಲ್ಲಿ ಗಾಳಿ-ಮಳೆಗೆ ಮರಗಳು ಧರಶಾಯಿಯಾಗಿರುವುದು, ಅಂಗಡಿ ಮಳಿಗೆಗೆ ನೀರು ನುಗ್ಗಿರುವ ಘಟನೆ ನಡೆದಿದೆ.
ಕಗ್ಗೋಡ್ಲು ಮುಖ್ಯ ರಸ್ತೆಯ ಗಿರೀಶ್ ಎಂಬವರ ಮಳಿಗೆಗೆ ನೀರು ನುಗ್ಗಿ ಪರದಾಡುವಂತಾಯಿತು. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಮಳೆಯಿಂದ ನದಿ, ತೊರೆ, ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಾಯಿತು.
ಗೋಣಿಕೊಪ್ಪಲು : ಕಳೆದ ಕೆಲವು ದಿನಗಳಿಂದ ರಾತ್ರಿ ವೇಳೆ ಹೆಚ್ಚಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈತರ ಜಮೀನಿಗೆ ಅಪಾರ ನಷ್ಟ ಸಂಭವಿಸಿದೆ.
ಬಾಳೆಲೆ ಹೋಬಳಿಯ ದೇವನೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಸಣ್ಣ ಆಣೆಕಟ್ಟು ಈ ಮಳೆಯಿಂದ ತುಂಬಿ ಹೋಗಿದೆ. ಇದರ ಹಿನ್ನೀರಿನಿಂದಾಗಿ ರೈತರು ಬೆಳೆದ ಭತ್ತ ಇತ್ಯಾದಿ ಬೆಳೆಗಳು ಕೊಚ್ಚಿ ಹೋಗಿದೆ.
ಮಳೆಯಿಂದಾಗಿ ಸುಳುಗೋಡು ಗ್ರಾಮದ ರೈತರ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ಪರಿಣಾಮ ಈ ಭಾಗದಲ್ಲಿ ರೈತರ ತಮ್ಮ ಭತ್ತದ ಗದ್ದೆಗಳಲ್ಲಿ
(ಮೊದಲ ಪುಟದಿಂದ) ಬೆಳೆದಿದ್ದ ಭತ್ತ ಫಸಲು, ಹಾಗೂ ಕಾಫಿ ತೋಟದ ಫಸಲುಗಳಿಗೆ ಅಪಾರ ನಷ್ಟ ಸಂಭವಿಸಿದೆ.
ತಿತಿಮತಿ, ಅರಕೇರಿ ಫಾರೆಸ್ಟ್, ಮಾವ್ ಕಲ್ ಬೆಟ್ಟದಿಂದ ಬರುವ ನೀರು ಕೀರೆಹೊಳೆಯಾಗಿ ದೇವನೂರು ತಲುಪುತ್ತದೆ. ಈ ನೀರು ಈ ಭಾಗದ ರೈತರಿಗೆ ಅನುಕೂಲವಾಗಲೂ ದೇವನೂರು ಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿದೆ.
ಇಲ್ಲಿ ತುಂಬಿದ ನೀರು ಬಾಳೆಲೆ ಮಾರ್ಗವಾಗಿ ಲಕ್ಷ್ಮಣ ತೀರ್ಥ ನದಿಯನ್ನು ಸೇರಲಿದೆ.
ಕಳೆದೆರಡು ದಿನಗಳಿಂದ ರಾತ್ರಿಯ ವೇಳೆ ಸುರಿಯುತ್ತಿರುವ ಮಳೆಯಿಂದ ಇಂತಹ ಅನಾಹುತ ಎದುರಾಗಿದೆ.ಈ ಭಾಗದ ನೂರಾರು ಎಕ್ರೆ ಭೂಮಿ ನೀರಿನಲ್ಲಿ ಮುಳುಗಡೆಯಾಗಿವೆ.
ಮಳೆ ವಿವರ
ಮಡಿಕೇರಿ ಕಸಬಾ ವ್ಯಾಪ್ತಿಯಲ್ಲಿ ೧.೮೧ ಇಂಚು, ನಾಪೋಕ್ಲು ವ್ಯಾಪ್ತಿಯಲ್ಲಿ ೧.೬೬ ಇಂಚು, ಸಂಪಾಜೆ ವ್ಯಾಪ್ತಿಯಲ್ಲಿ ೨.೧೮ ಇಂಚು, ಭಾಗಮಂಡಲ ೧.೪೯ ಇಂಚು ಮಳೆಯಾಗಿದ್ದು, ಮಡಿಕೇರಿ ತಾಲೂಕಿನಲ್ಲಿ ಒಟ್ಟು ಸರಾಸರಿ ೧.೭೯ ಇಂಚು ಮಳೆಯಾಗಿದೆ.
ವೀರಾಜಪೇಟೆ ಕಸಬಾ ವ್ಯಾಪ್ತಿಯಲ್ಲಿ ೨.೪೪ ಇಂಚು, ಹುದಿಕೇರಿ ೧.೯೨ ಇಂಚು, ಶ್ರೀಮಂಗಲ ೨.೪೪ ಇಂಚು, ಪೊನ್ನಂಪೇಟೆ ೨.೩೬ ಇಂಚು, ಅಮ್ಮತ್ತಿ ೧.೯೨ ಇಂಚು, ಬಾಳೆಲೆ ೧.೬೯ ಇಂಚು, ತಾಲೂಕಿನಲ್ಲಿ ಸರಾಸರಿ ೨.೧೩ ಇಂಚು ಮಳೆಯಾಗಿದೆ.
ಸೋಮವಾರಪೇಟೆ ಕಸಬಾ ವ್ಯಾಪ್ತಿಯಲ್ಲಿ ೦.೨೫ ಇಂಚು, ಶನಿವಾರಸಂತೆ ೦.೩೩ ಇಂಚು, ಶಾಂತಳ್ಳಿ ೧೩.೦, ಕೊಡ್ಲಿಪೇಟೆ ೦.೭೫ ಇಂಚು, ಕುಶಾಲನಗರ ೨.೦೪ ಇಂಚು, ಸುಂಟಿಕೊಪ್ಪ ೧.೮೧ ಇಂಚು, ತಾಲೂಕಿನಲ್ಲಿ ಸರಾಸರಿ ೦.೯೫ ಇಂಚು ಮಳೆಯಾಗಿದೆ.
ಜಿಲ್ಲೆಯ ಸರಾಸರಿ ಮಳೆ ೧.೬೨ ಇಂಚು ಮಳೆಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ.