ಮಡಿಕೇರಿ, ಅ. ೩: ವಿಧಾನಸಭಾ ಅಧಿವೇಶನ, ವಿಧಾನ ಪರಿಷತ್ ಕಲಾಪಗಳೆನ್ನುವುದು ವಿಧಾನ ಸಭಾ ಸದಸ್ಯರುಗಳು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಗಳಲ್ಲಿನ ಅಭೃವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲು ಸರ್ಕಾರದ ಗಮನ ಸೆಳೆದು ಕೆಲಸಗಳನ್ನು ಮಾಡಿಸಿಕೊಳ್ಳಲು ಇರುವಂತಹ ಒಂದು ಅವಕಾಶ. ಅಧಿವೇಶನ ಹಾಗೂ ಕಲಾಪಗಳು ಆರಂಭವಾಯಿತೆAದರೆ ನಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಅಲ್ಲಿ ಚರ್ಚೆಯಾಗುತ್ತವೆಯೇ? ಪರಿಹಾರ ಕಾಣುತ್ತವೆಯೇ? ಎಂಬ ನಿರೀಕ್ಷೆಗಳು ಕ್ಷೇತ್ರದ ಜನರಲ್ಲೂ ಇರುತ್ತದೆ ಎಂಬುದು ವಾಸ್ತವ. ಆದರೆ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ; ಅಪೂರ್ಣ ಕಾಮಗಾರಿಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕಾದ ಶಾಸಕರುಗಳು ಅವರುಗಳ ಜಿಲ್ಲೆಗೆ ಸಂಬAಧಿಸದ ವಿಚಾರಗಳ ಬಗ್ಗೆ; ಜಿಲ್ಲೆಯ ಅಧಿಕಾರಿಗಳಿಂದಲೇ ಪಡೆದುಕೊಳ್ಳಬಹುದಾದ ಮಾಹಿತಿಗಳ ಕುರಿತು ವಿಧಾನ ಸಭೆಯಲ್ಲಿ ವಿಧಾನ ಪರಿಷತ್‌ನಲ್ಲಿ ಪ್ರಸ್ತಾಪಿಸುತ್ತಾರೆ ಎಂದರೆ ಇದಕ್ಕೆ ಏನೆನ್ನಬೇಕು?
ಮಡಿಕೇರಿ ವ್ಯಾಪ್ತಿಯಲ್ಲಿ ಸುವರ್ಣ ಸಮುಚ್ಚಯ ಭವನ ನೆನೆಗುದಿಗೆ ಬಿದ್ದಿದೆ. ಮಿನಿವಿಧಾನ ಸೌಧ ತಲೆಎತ್ತಿಲ್ಲ, ಅಬಕಾರಿ ಭವನ ಅಪೂರ್ಣವಾಗಿದೆ, ಜಿಲ್ಲಾ ಕ್ರೀಡಾಂಗಣಕ್ಕೆ ಕಾಯಕಲ್ಪ ಬೇಕಿದೆ, ಕೊಡವ ಹೆರಿಟೇಜ್ ಸೆಂಟರ್ ಅರ್ಧಕ್ಕೆ ನಿಂತಿದೆ, ಕಾವೇರಿ ಕಲಾಕ್ಷೇತ್ರ ಇಂದೋ ನಾಳೆಯೋ ಕುಸಿಯುವ ಹಂತದಲ್ಲಿದೆ, ಕುಶಾಲನಗರದಲ್ಲಿ ಕಲಾಭವನದ ಕನಸು ಇನ್ನೂ ನನಸಾಗಿಲ್ಲ, ಸೋಮವಾರಪೇಟೆ ಟರ್ಫ್ ಮೈದಾನ ಕಾಮಗಾರಿ ಕುಂಟುತ್ತಾ ಸಾಗಿದೆ, ಶನಿವಾರಸಂತೆಯಲ್ಲಿ ಸುಸಜ್ಜಿತ ನಾಡ ಕಚೇರಿ ಇಲ್ಲ. ಹೀಗೆ... ಪಟ್ಟಿ ಮಾಡುತ್ತಾ ಹೋದರೆ ಸರ್ಕಾರದಿಂದ ಆಗಬೇಕಾದ ಸಾಕಷ್ಟು ಕೆಲಸ ಕಾರ್ಯಗಳು ಕೊಡಗಿನಲ್ಲಿ ಬಾಕಿಯಿದೆ. ಆದರೆ ಈ ಬಗ್ಗೆ ಸದನದಲ್ಲಿ ಸದ್ದು ಮಾಡಬೇಕಾದ ನಮ್ಮ ಶಾಸಕರುಗಳು ಸದನದಲ್ಲಿ ಪ್ರಶ್ನಿಸಲು ಸಿಗುವ ಅವಕಾಶದಲ್ಲಿ ಜಿಲ್ಲೆಗೆ ಉಪಯೋಗವಾಗುವ ಕೆಲವು ಪ್ರಶ್ನೆಗಳನ್ನು ಹೊರತು ಪಡಿಸಿ ಉಳಿದಂತೆ ಜಿಲ್ಲಾಮಟ್ಟದಲ್ಲೇ ಮಾಹಿತಿ ಪಡೆಯಬಹುದಾದ ಪ್ರಶ್ನೆಗಳನ್ನು; ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದಕ್ಕೆ ಉದಾಹರಣೆ ಇಲ್ಲಿದೆ.
* ಕೊಡಗು ಜಿಲ್ಲೆಯಲ್ಲಿರುವ ಒಟ್ಟು ಪೊಲೀಸ್ ಠಾಣೆಗಳೆಷ್ಟು? ಇರುವ ಸಿಬ್ಬಂದಿಗಳೆಷ್ಟು? ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣಗಳೆಷ್ಟು? ಅವುಗಳಲ್ಲಿ ಇತ್ಯರ್ಥವಾಗಿರುವುದು ಹಾಗೂ ಇತ್ಯರ್ಥವಾಗದೆ ಇರುವುದೆಷ್ಟು? ಈ ಪ್ರಶ್ನೆಗೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಿಂದ ಉತ್ತರ ಸಿಗುವುದಿಲ್ಲವೆ? ಅದನ್ನು ಅಧಿವೇಶನದಲ್ಲೇ ಪ್ರಶ್ನಿಸಬೇಕಾ ಶಾಸಕರೆ.
* ಪಾರಂಪಾರಿಕಾ ಕಲೆಗಳಾದ ಕಂಸಾಳೆ, ಚೌಡಿಕೆ, ವೀರಭದ್ರ ಕುಣಿತ, ಡೋಲು ಬಡಿತ, ನಾದಸ್ವರ ಕಲಿಕೆಯಂತಹ ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳು ಯಾವುದಾದರೂ ಇದೆಯೇ? ಈ ಪ್ರಶ್ನೆಯಿಂದ ಕೊಡಗಿಗೆ ಏನಾದರೂ ಲಾಭವಿದೆಯೆ ? ನೀವೆ ಹೇಳಿ.
* ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಕೊಡವ ಹೆರಿಟೇಜ್ ಕೇಂದ್ರ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಗೊಂಡಿದೆಯೆ ? ಈ ಬಗ್ಗೆ ಮಡಿಕೇರಿಯಿಂದ ಅನತಿ ದೂರದಲ್ಲಿ ನೆಲೆಸಿರುವ ನಿಮಗೆ ಮಾಹಿತಿ ಇಲ್ಲವೇ ? ಇದನ್ನೂ ಕಲಾಪದಲ್ಲಿ ಪ್ರಶ್ನಿಸಬೇಕೆ? ನೀವೇ ಚಿಂತಿಸಿ.
ಮೇಲಿನವು ಒಂದೆರಡು ಉದಾಹರಣೆಗಳಷ್ಟೆ. ಹಳೆಯ ಪ್ರಶ್ನಾ ಕಡತಗಳನ್ನು ಕೆದಕಿದರೆ ಇನ್ನೂ ಸಾಕಷ್ಟಿವೆ. ಕೊಡಗಿನಲ್ಲಿ ಅಭಿವೃದ್ಧಿ ಕೆಲಸಗಳು ನಡೆಯಬೇಕಾದದ್ದು ತುಂಬಾ ಇದೆ. ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ಕೊರತೆಯೂ ಇದೆ. ಕೆಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಇಲಾಖೆಗಳು ಸ್ವಂತ ಕಟ್ಟಡವಿಲ್ಲದೆ ಪರಿತಪಿಸುತ್ತಿವೆ. ಪರಿಸ್ಥಿತಿ ಹೀಗಿರುವಾಗ ಸದನದಲ್ಲಿ ಇವುಗಳ ಬಗ್ಗೆ ಶಾಸಕರುಗಳು ಗಮನ ಸೆಳೆಯಬೇಕಿದೆ. ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳಿಂದ ಪಡೆಯಬಹುದಾದ ಮಾಹಿತಿಗಳನ್ನು ಇಲ್ಲಿಯೆ ಅಧಿಕಾರಿಗಳಿಂದ ಪಡೆದು ಸರ್ಕಾರದಿಂದ ಆಗಬೇಕಾದುದನ್ನು ಅಧಿವೇಶನದಲ್ಲಿ ಕೇಳುವಂತಾಗಬೇಕು. ಕಣ್ಣೆದುರೇ ಸಿಗುವ ಮಾಹಿತಿಯನ್ನು ಜಿಲ್ಲೆಗೆ ಉಪಯೋಗವಿಲ್ಲದ ಪ್ರಶ್ನೆಗಳನ್ನು ಸದನದಲ್ಲಿ ಮುಂದಿಟ್ಟು ಸಮಯ ವ್ಯರ್ಥ ಮಾಡದೆ ಶಾಸಕರುಗಳು ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು.
- ಉಜ್ವಲ್ ರಂಜಿತ್