ಗೋಣಿಕೊಪ್ಪ ವರದಿ, ಅ. ೩: ಜಲಮೂಲ ರಕ್ಷಣೆ, ಕೃಷಿ ಯೋಜನೆ ಬಗ್ಗೆ ರೈತರಿಗೆ ಮಾಹಿತಿ ನೀಡುವುದು ಸೇರಿದಂತೆ ಹಲವು ಕಾರ್ಯಕ್ರಮಗಳ ಅನುಷ್ಠಾನ ಮಾಡುವ ಬಗ್ಗೆ ವೀರಾಜಪೇಟೆ ಮಂಡಲ ಬಿಜೆಪಿ ಕೃಷಿಮೋರ್ಚಾದ ಸಭೆಯಲ್ಲಿ ನಿರ್ಧರಿಸಲಾಯಿತು.
ಪೊನ್ನಂಪೇಟೆ ಗೋಲ್ಡನ್ ಗೇಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯಮಟ್ಟದ ಸೂಚನೆಯಂತೆ ಅನುಷ್ಠಾನ ಗೊಳಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಗ್ರಾಮ ವ್ಯಾಪ್ತಿಯಲ್ಲಿ ಪರಿಸರ ಕ್ರಾಂತಿ ಮೂಡಿಸಲು ಗಿಡ ನೆಡುವ ಕಾರ್ಯ, ಸ್ವಚ್ಛತಾ ಅಭಿಯಾನ, ನೈಸರ್ಗಿಕ ಜಲಮೂಲ ಕೆರೆ, ನದಿ, ಹೊಂಡ ಜಾಗದಲ್ಲಿ ಕಸ ನಿರ್ವಹಣೆ, ಪ್ಲಾಸ್ಟಿಕ್ ಮುಕ್ತ ಮಾಡುವುದರಿಂದ ಜಲಮೂಲ ಕಾಪಾಡಿಕೊಳ್ಳುವ ಯೋಜನೆ, ಪ್ಲಾಸ್ಟಿಕ್ ಬದಲು ಕಾಟನ್ ಬಟ್ಟೆ ಕೈಚೀಲ ವಿತರಿಸುವುದು, ರೈತರಿಗೆ ಸರ್ಕಾರದ ಕೃಷಿ ಪೂರಕ ಯೋಜನೆ ಮಾಹಿತಿ ನೀಡುವುದು, ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುವ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು.
ವೀರಾಜಪೇಟೆ ಮಂಡಲ ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಕಟ್ಟೆರ ಈಶ್ವರ ತಿಮ್ಮಯ್ಯ, ಕೊಡಗು ಕೃಷಿ ಮೋರ್ಚಾ ಸಹ ಉಸ್ತುವಾರಿ ಯುಮುನಾ ನಾಣಯ್ಯ, ಜಿಲ್ಲಾ ಉಪಾಧ್ಯಕ್ಷ ಸಂದೀಪ್, ಪ್ರಧಾನ ಕಾರ್ಯದರ್ಶಿ ಕಬೀರ್‌ದಾಸ್, ಸದಸ್ಯ ಆಶಾ, ಮಚ್ಚಾರಂಡ ಕಿರಣ್, ಸೋಮೇಂಗಡ ಗಣೇಶ್, ತಾಲೂಕು ಪ್ರ. ಕಾರ್ಯದರ್ಶಿ ತೋರೀರ ವಿನು, ಶಕ್ತಿಕೇಂದ್ರ ಪ್ರಮುಖ್ ಮೂಕಳೇರ ಮಧು ಇತರರಿದ್ದರು.