ಸೋಮವಾರಪೇಟೆ, ಅ.೨: ಪೋಷಕರನ್ನು ಕಳೆದುಕೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನೋರ್ವ ಸಹೃದಯಿ ದಾನಿಗಳ ನೆರವಿನಿಂದ ಮರು ಜನ್ಮ ಪಡೆದಿದ್ದು, ತನ್ನ ಜೀವ ಉಳಿವಿಗೆ ಕಾರಣಕರ್ತರಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದರೊಂದಿಗೆ ತನಗೆ ಹರಿದುಬಂದ ಹಣದ ಲೆಕ್ಕವನ್ನು ಸಾರ್ವಜನಿಕವಾಗಿ ನೀಡುವ ಮೂಲಕ ಮಾದರಿಯಾಗಿದ್ದಾನೆ.
ಕಾಗಡಿಕಟ್ಟೆ ಹೊನ್ನವಳ್ಳಿ ಗ್ರಾಮದ ಅಜ್ಜಿಯ ಮನೆಯಲ್ಲಿರುವ ಜೀವನ್‌ಗೆ ದಿಢೀರಾಗಿ ಅನಾರೋಗ್ಯ ಕಾಣಿಸಿಕೊಂಡಿದ್ದು, ದೇಹ ಊದಿಕೊಳ್ಳಲು ಆರಂಭವಾಯಿತು. ಕೂಲಿ ಕಾರ್ಮಿಕರಾಗಿರುವ ಅಜ್ಜಿ ಬಸಮ್ಮ ಅವರಿಗೆ ಈತನ ಚಿಕಿತ್ಸೆಗೆ ಹಣವಿರಲಿಲ್ಲ.
ಈ ಬಗ್ಗೆ ಹೊನ್ನವಳ್ಳಿ ಗ್ರಾಮದ ವೀರೇಶ್ ಎಂಬವರಿಗೆ ಮಾಹಿತಿ ದೊರೆತು, ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರಿಗೆ ತಿಳಿಸಿದರು. ನಂತರ ಪತ್ರಿಕೆಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ದಾನಿಗಳಿಂದ ಚಿಕಿತ್ಸೆಗೆ ಧನಸಹಾಯ ಕೋರಿದರು.
ಒಂದೆರಡು ದಿನದಲ್ಲಿ ಜೀವನ್ ಖಾತೆಗೆ ೨ ಲಕ್ಷ ರೂ. ಜಮೆಯಾಯಿತು. ನಂತರ ಮಂಗಳೂರಿನ ಫಾದರ್‌ಮುಲ್ಲರ್ ಆಸ್ಪತ್ರೆಗೆ ಸೇರಿಸಿ ಸೂಕ್ತ ಸಮಯದಲ್ಲಿ ಎರಡು ಕಿಡ್ನಿಗೆ ಸಂಬAಧಪಟ್ಟ ಸರ್ಜರಿ ನಡೆಯಿತು. ಎರಡು ತಿಂಗಳು ಆಸ್ಪತ್ರೆಯಲ್ಲೇ ಇದ್ದು, ರಿಯಾಯಿತಿ ದರದಲ್ಲಿ ಚಿಕಿತ್ಸೆ ಪಡೆದುಕೊಂಡು ಇದೀಗ ಜೀವನ್ ಗುಣಮುಖನಾಗಿದ್ದಾನೆ.
ದಾನಿಗಳ ಸಹಕಾರದಿಂದ ಜೀವದಾನ ಪಡೆದಿರುವ ಜೀವನ್, ಪತ್ರಿಕಾಭವನಕ್ಕೆ ಆಗಮಿಸಿ ದಾನಿಗಳಿಗೆ, ಪತ್ರಿಕೆಗೆ ಮತ್ತು ಸಹಾಯ ಮಾಡಿದವರಿಗೆ ಧನ್ಯವಾದ ತಿಳಿಸಿದ್ದಾನೆ. ದಾನಿಗಳು ನೀಡಿದ ೨ ಲಕ್ಷ ಹಣದಲ್ಲಿ ೧,೬೦,೦೦೦ ರೂ. ಚಿಕಿತ್ಸೆಗೆ ಖರ್ಚಾಗಿದ್ದು, ೪೦ ಸಾವಿರ ರೂ., ಖಾತೆಯಲ್ಲಿದೆ ಎಂದು ಸಾರ್ವಜನಿಕವಾಗಿ ಲೆಕ್ಕ ಕೊಟ್ಟಿದ್ದಾನೆ.
ಈಗ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ದಾಖಲಾತಿ ಪಡೆದಿದ್ದಾನೆ. ತನಗೆ ದೊರೆತ ಸಹಕಾರ ವನ್ನು ಸಾರ್ವಜನಿಕವಾಗಿ ತಿಳಿಸಿ, ಕೃತಜ್ಞತೆ ಸಲ್ಲಿಸುವ ಮೂಲಕ ಜೀವನ್ ಎಲ್ಲರಿಗೂ ಮಾದರಿಯಾಗಿದ್ದಾನೆ.