ಸೋಮವಾರಪೇಟೆ, ಅ. ೨: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಟೆಬೆಟ್ಟಕ್ಕೆ ಖಾಸಗಿಯಾಗಿ ಪ್ರವೇಶ ಶುಲ್ಕ ವಿಧಿಸುತ್ತಿರುವ ಕ್ರಮವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆಗ್ರಹಿಸಿ ಶಿರಂಗಳ್ಳಿ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು.
ಶಿರಂಗಳ್ಳಿ ಗ್ರಾಮದ ಬಸ್ ನಿಲ್ದಾಣದ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಸ್ಥಳೀಯರು, ಗ್ರಾ.ಪಂ. ವ್ಯಾಪ್ತಿಯ ಕೋಟೆಬೆಟ್ಟ ಸೇರಿದಂತೆ ಇತರ ಪ್ರವಾಸಿ ತಾಣ ಗಳನ್ನು ಸರ್ಕಾರದ ವತಿಯಿಂದಲೇ ಅಭಿವೃದ್ಧಿಪಡಿಸಿ ಗ್ರಾ.ಪಂ.ಗೆ ಆದಾಯ ಬರುವಂತೆ ಮಾಡಲು ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಶಿರಂಗಳ್ಳಿ ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಚಿನ್ ಮಾತನಾಡಿ, ಕೋಟೆಬೆಟ್ಟಕ್ಕೆ ಪ್ರವೇಶ ಕಲ್ಪಿಸುವ ರಸ್ತೆಯಲ್ಲಿ ಖಾಸಗಿಯಾಗಿ ಸುಂಕ ವಸೂಲಾತಿ ಮಾಡುತ್ತಿರುವು ದನ್ನು ತಕ್ಷಣ ಸ್ಥಗಿತಗೊಳಿಸಬೇಕು. ಪ್ರವಾಸಿ ತಾಣಗಳನ್ನು ಸರ್ಕಾರದ ವತಿಯಿಂದಲೇ ನಿರ್ವಹಣೆ ಮಾಡಿ, ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿದರು.
ಅಧ್ಯಕ್ಷ ಮೋರ್ಕಂಡ ನಾಣಿಯಪ್ಪ, ಪ್ರಮುಖರಾದ ನಾಪಂಡ ಮುತ್ತಪ್ಪ, ಮಂದೆಯAಡ ಬೋಪಣ್ಣ, ಉಡುವೆರ ದಮಯಂತಿ, ಮೋರ್ಕಂಡ ಪಾರ್ವತಿ, ಉಡುವೆರ ಗೈನಿಕ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಮಾದಾಪುರ ಪೊಲೀಸ್ ಉಪ ಠಾಣೆಯ ಮುಖ್ಯ ಪೇದೆ ಸುರೇಶ್ ಸೇರಿದಂತೆ ಸಿಬ್ಬಂದಿಗಳು ಸ್ಥಳದಲ್ಲಿದ್ದರು.