ಮಡಿಕೇರಿ, ಅ. ೨:: ಇಲ್ಲಿ ರಸ್ತೆಯೇ ಇಲ್ಲ ಬರೀ ಕಾಡು ಮತ್ತು ಕಡಿದಾದ ಶಿಖರಗಳು, ಹಿಂದೆ ರೋಗಿಗಳು ವೃದ್ಧರು ಮತ್ತು ಅಶಕ್ತರನ್ನು ಬೆನ್ನಿಗೆ ಜೋಳಿಗೆ ಕಟ್ಟಿಕೊಂಡು ಕಲ್ಲು-ಮಣ್ಣಿನ ರಸ್ತೆಗಳಲ್ಲಿ ಕಾಡು ಪ್ರಾಣಿಗಳ ಭಯದಲ್ಲಿ ಬೆಟ್ಟ ಇಳಿಯಬೇಕಿತ್ತು, ಈಗ ಜೀಪುಗಳು ಬಂದಿವೆ. ಆದರೆ ರಸ್ತೆಯೇ ಇಲ್ಲ, ಆಸ್ಪತ್ರೆಗಳು ಬಿಡಿ ಇಲ್ಲಿ ದಾರಿಮಧ್ಯೆ ಜೀಪಿನಲ್ಲೇ ಹೆರಿಗೆಯಾಗುತ್ತದೆ. ಇಂಟರ್ನೆಟ್ ಇವರ ಕೈಗೆಟುಕದ ಕುಸುಮ, ಸದ್ಯಕ್ಕೆ ೨ಜಿ ನೆಟ್‌ವರ್ಕ್ ಆದರೂ ಕೊಡಿ ಎನ್ನುವುದು ಇವರ ಅರಣ್ಯರೋಧನ. ತೋಡು ಮತ್ತು ಹೊಳೆಗಳಿಗೆ ಮೋರಿ, ಸೇತುವೆಗಳು ಇಲ್ಲ, ಆಪತ್ಕಾಲಕ್ಕೆ ಇವರು ಅಪಾಯಕಾರಿ ಬಿದಿರು ಸೇತುವೆಯನ್ನು ಬಳಸುತ್ತಿದ್ದಾರೆ.!

ಮಡಿಕೇರಿ ತಾಲೂಕು ಚೆಂಬು ಗ್ರಾಮ ಪಂಚಾಯಿತಿಗೆ ಸೇರಿದ ಕಡಿದಾದ ಶಿಖರದ ಮೇಲೆ ನೆಲೆಗೊಂಡಿರುವ ಕಟ್ಟಪಳ್ಳಿ ಚೆಂಬು ಗ್ರಾಮ ಪಂಚಾಯಿತಿಗೆ ಅರ್ಧಭಾಗ ಮತ್ತು ಭಾಗಮಂಡಲ ಬಳಿಯ ತಾವೂರು ಗ್ರಾಮ ಪಂಚಾಯಿತಿಗೆ ಇನ್ನರ್ಧ ಭಾಗ ಹಂಚಿಹೋಗಿರುವ ಕಟ್ಟ ಪಳ್ಳಿ ಹಾಗೂ ಉಂಬಾಳೆ ಗ್ರಾಮದ ಜನರ ನೋವು ‘ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿ ದೊಡೆಂತಯ್ಯ’ ಎನ್ನುವ ವಚನಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆ ಎರಡೂ ಗ್ರಾಮಗಳು ಸಂಪೂರ್ಣವಾಗಿ ರಕ್ಷಿತಾರಣ್ಯದಿಂದ ಸುತ್ತುವರೆಯಲ್ಪಟ್ಟಿದ್ದು ಇಲ್ಲಿನ ನೂರಾರು ಕುಟುಂಬಗಳ ಬದುಕಿನ ದಿಕ್ಕು ದೆಸೆಯನ್ನು ನಿಯಂತ್ರಿಸುತ್ತಿರುವುದು ಅರಣ್ಯ ಇಲಾಖೆ. ಒತ್ತಡ ತಾಳಲಾರದೆ ಗ್ರಾಮಸ್ಥರು ಸ್ವಲ್ಪ ಪ್ರತಿರೋಧ ಒಡ್ಡಿದರೂ ಅರಣ್ಯ ಇಲಾಖೆ ಇವರ ಮೇಲೆ ಕೇಸು ಹಾಕುವುದು ಖಚಿತ.

ಜೀಪಿನಲ್ಲಿ ಹೆರಿಗೆ..!

ಗ್ರಾಮಕ್ಕೆ ಹೋಗಬೇಕಾದರೆ ರಕ್ಷಿತಾರಣ್ಯದ ಒಳಗಿರುವ ಕಲ್ಲು-ಮಣ್ಣಿನ ಕೆಸರಿನ ರಸ್ತೆಯೊಳಗೆ ಸಾಗಿಯೇ ಹೋಗಬೇಕು ಹಾಗಾಗಿ ಅರಣ್ಯಾಧಿಕಾರಿಗಳ ಮರ್ಜಿ ಕಾಯಲೆ ಬೇಕು, ವಾಹನ ವೆಂದರೆ ಅದು ಬೇರೆ ಯಾವುದೇ ವಾಹನಗಳಲ್ಲ ಬರೀ ಫೋರ್ ವೀಲ್ ಜೀಪಿಗೆ ಮಾತ್ರ ಸಾಧ್ಯ..

(ಮೊದಲ ಪುಟದಿಂದ) ಇಲ್ಲಿ ಕೆಲವೇ ಕೆಲವು ಕಡೆ ಕಾಂಕ್ರಿಟ್ ರಸ್ತೆಗಳನ್ನು ಮಾಡಿದ್ದಾರೆ ಹೊರತುಪಡಿಸಿದರೆ ಬಾಕಿ ಇರುವ ರಸ್ತೆಗಳೆಲ್ಲ ಹಿಂದೆ ಯಾವುದೋ ಮರ ವ್ಯಾಪಾರಿ ಗ್ರಾಮದ ತಲೆಯ ಮೇಲಿರುವ ಬೃಹತ್ ಎಸ್ಟೇಟ್ ಒಂದರಿAದ ಟಿಂಬರ್ ಸಾಗಿಸಲು ಮಾಡಿದ ರಸ್ತೆಗಳು. ಈ ರಸ್ತೆಗಳು ಎಷ್ಟು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದರೆ ಇಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಜೀಪು ಕಡ್ಡಾಯವಾಗಿ ಇರಲೇಬೇಕು ಅಂತಹ ಜೀಪೊಂದರಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ಗರ್ಭಿಣಿಗೆ ಜೀಪಿನಲ್ಲಿಯೇ ಪ್ರಸವ ಆಗಿರುವ ನಿದರ್ಶನಗಳಿವೆ. ಬಹಳಷ್ಟು ಜೀಪುಗಳು ಈ ಗ್ರಾಮದ ಕಡಿದಾದ ಶಿಖರಗಳ ನಡುವೆ ಸಂಚರಿಸುವಾಗ ಅಪಘಾತಕ್ಕೆ ಈಡಾಗಿವೆ. ಇಲ್ಲಿ ಗರ್ಭಿಣಿಯರು ಹೆದರಿಕೆಯಿಂದ ತಮ್ಮ ದಿನ ತುಂಬುವ ಹಲವು ದಿನಗಳ ಮೊದಲೇ ಪಕ್ಕದ ಆಸ್ಪತ್ರೆಗಳಿಗೆ ಹೋಗಿ ಹೆರಿಗೆಗೆ ದಾಖಲಾಗಿ ಬಿಡುತ್ತಾರೆ. ಈ ರಸ್ತೆಯಲ್ಲಿ ಜೀಪು ಓಡಿಸುವ ಚಾಲಕರಿಗೆ ಅವರ ಸಾಹಸಕ್ಕಾಗಿ ನಮ್ಮ ಸರ್ಕಾರವು ಗಣರಾಜ್ಯೋತ್ಸವದ ದಿನದಂದು ಶೌರ್ಯ ಪ್ರಶಸ್ತಿ ಖಂಡಿತ ನೀಡಬೇಕಿದೆ.

ನೆಟ್‌ವರ್ಕ್ ಮರೀಚಿಕೆ..!

ಈ ಗ್ರಾಮದ ಮತ್ತೊಂದು ಅತಿ ಮುಖ್ಯ ಸಮಸ್ಯೆ ಇಲ್ಲಿ ಇಷ್ಣು ಎತ್ತರದಲ್ಲಿದ್ದರೂ ಮೊಬೈಲ್ ನೆಟ್‌ವರ್ಕ್ ಇಲ್ಲವೇ ಇಲ್ಲ. ‘ನಮಗೆ ಫೋರ್ ಜಿ ಫೈವ್ ಜಿ ನೆಟ್‌ವರ್ಕ್ ಸಾಯಲಿ ಕನಿಷ್ಟ ೨ಜಿ ಮೊಬೈಲ್ ಫೋನಿನಲ್ಲಿ ಮಾತನಾಡುವಷ್ಟು ಅದರೂ ನೆಟ್‌ವರ್ಕ್ ದೊರಕಿಸಿಕೊಡಿ’ ಎನ್ನುವುದು ಇಲ್ಲಿಯ ಗ್ರಾಮಸ್ಥರ ಅಳಲು. ಶಾಲಾ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳಲು ಅಪ್ಪ-ಅಮ್ಮಂದಿರು ತಮ್ಮ ಜೀಪಿನಲ್ಲಿ ಕೊಡಗಿನಿಂದ ಬೆಟ್ಟವಿಳಿದು ಕೆಳಗೆ ದಕ್ಷಿಣ ಕನ್ನಡದ ಕಲ್ಲುಗುಂಡಿ ಗ್ರಾಮಕ್ಕೆ ಬರಬೇಕು.

ಪಂಚಾಯಿತಿಗೆ ಅಲೆದಾಟ

ಹಲವಾರು ಅಭಿವೃದ್ಧಿಯ ವಿಚಾರಗಳಲ್ಲಿ ಇಲ್ಲಿಯ ಗ್ರಾಮಸ್ಥರನ್ನು ಚೆಂಬು ಗ್ರಾಮ ಪಂಚಾಯಿತಿ ಮತ್ತು ತಾವೂರು ಗ್ರಾಮ ಪಂಚಾಯಿತಿ ಫುಟ್ಬಾಲ್ ನಂತೆ ಇಲ್ಲಿಂದ ಅತ್ತ ಅಲ್ಲಿಂದ ಇತ್ತ ಒದೆಯುತ್ತದೆ. ಇಲ್ಲಿಯ ಗ್ರಾಮಸ್ಥರು ಯಾವುದಾದರೂ ಸರಕಾರಿ ಕೆಲಸಕ್ಕೆ ತಾವೂರಿಗೆ ಹೋಗಬೇಕೆಂದರೆ ಅತ್ಯಂತ ದುರ್ಗಮ ಮತ್ತು ಕಡಿದಾದ ಕಣಿವೆಯನ್ನು ಕಿಲೋಮೀಟರ್ ಗಟ್ಟಲೆ ಹತ್ತಿ ಏರುಸಿರು ಬಿಡುತ್ತಾ ಅಲ್ಲಿಗೆ ತಲುಪುವಷ್ಟರಲ್ಲಿ ಸಮಯ ಸಂಜೆಯಾಗಿರುತ್ತದೆ. ಇಲ್ಲಿ ಹಲವು ಜನರು ಜಮ್ಮ ಹಿಡುವಳಿದಾರರಾಗಿದ್ದು ಅರಣ್ಯ ಅಂಚಿನಲ್ಲಿ ವಾಸಿಸುತ್ತಿರುವ ತಪ್ಪಿಗೆ ಇವರ ಬಹುತೇಕ ಕಂದಾಯ ಮತ್ತು ಪೈಸಾರಿ ಜಮೀನು ಈಗ ಹಾಲಿ ಅರಣ್ಯ ಇಲಾಖೆಗೆ ವರ್ಗಾಯಿ ಸಲ್ಪಟ್ಟಿದೆ. ಜಮಾ ಬಂದಿ ದಾಖಲೆಗಳಲ್ಲಿ ಪೈಸಾರಿ ಅಥವಾ ಜಮ್ಮಾ ಎಂದು ಇದ್ದದ್ದು ಅದು ಹೇಗೆ ಅರಣ್ಯ ಇಲಾಖೆಯ ಜಾಗ ಎಂದು ಮಾರ್ಪಾಡಾಯಿತು ಮತ್ತು ಈ ಮ್ಯಾಜಿಕ್ ಹೇಗೆ ಸಾಧ್ಯ ಎಂದು ಇಲ್ಲಿಯ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ಇಂದಿನವರೆಗೆ ಉತ್ತರವೇ ದೊರೆತಿಲ್ಲ.

ಬೆಳಕು ಕಂಡಿಲ್ಲ

ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುಡಿಯ ಜನಾಂಗದ ಅರಣ್ಯವಾಸಿಗಳು ಇದ್ದು ಅವರ ಸಂಕಷ್ಟಗಳು ನೂರಾರು. ಅರಣ್ಯ ಹಕ್ಕು ಕಾಯ್ದೆ ಅವರ ಪಾಲಿಗೆ ಹೆಸರಿಗಷ್ಟೇ. ಏನಾದರೂ ಅರಣ್ಯ ಉತ್ಪತ್ತಿಗಳನ್ನು ಮುಟ್ಟಿದರೆ ಅರಣ್ಯ ಇಲಾಖೆ ಕೇಸು ಉಚಿತ. ಎರಡು ಗ್ರಾಮಗಳಲ್ಲಿ ೧೫೦ರಿಂದ ೨೦೦ ಮನೆಗಳಿದ್ದು ಇಂದಿಗೂ ಇಲ್ಲಿಯ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಉಳ್ಳವರ ಮಕ್ಕಳು ಓದಲು ಸೋಲಾರ್ ದೀಪ ಬಳಸಿದರೆ ಬಡವರ ಮಕ್ಕಳು ಇವತ್ತಿಗೂ ಸೀಮೆಎಣ್ಣೆ ಬುಡ್ಡಿ ದೀಪದ ಬೆಳಕಿನಲ್ಲಿ ಓದು ಬರಹ ಕಲಿಯಬೇಕಿದೆ. ಸಮಸ್ಯೆಗಳ ನಡುವೆ ದಶಕಗಳಿಂದ ಪರಿತಪಿಸುತ್ತಿರುವ ಈ ಗ್ರಾಮದ ಜನತೆಯ ಮನೆಗಳಿಗೆ ಬೆಳಕಿನ ದಾರಿ ಯಾವಾಗ ಪ್ರಾಪ್ತಿಯಾಗುತ್ತದೋ..?

ರಕ್ಷಣಾ ವೇದಿಕೆ ವಾಸ್ತವ್ಯ

ಗ್ರಾಮಸ್ಥರ ಸಮಸ್ಯೆ ಅರಿಯುವ ನಿಟ್ಟಿನಲ್ಲಿ ಕೊಡಗು ರಕ್ಷಣಾ ವೇದಿಕೆಯವರು ಈ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದ ಸಂದರ್ಭ ಗ್ರಾಮಸ್ಥರು ತಾವುಗಳು ಅನುಭವಿಸುತ್ತಿರುವ ನೋವುಗಳನ್ನು ತೋಡಿಕೊಂಡರು. ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಉಪಾಧ್ಯಕ್ಷ ತಂಬಾAಡ ಡ್ಯಾನಿ ನಾಣಯ್ಯ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಪ್ಪ, ಉಪಾಧ್ಯಕ್ಷ ಚೇರಂಡ ರೋಷನ್, ಸಂಪಾಜೆ ಹೋಬಳಿ ಉಸ್ತುವಾರಿ ನಾರಾಯಣ, ಸಂಪಾಜೆ ಹೋಬಳಿ ಅಧ್ಯಕ್ಷÀ ಜ್ಞಾನೇಶ್, ಸಂಪಾಜೆ ವಲಯ ಅಧ್ಯಕ್ಷ ಹೊಸೂರು ಅಣ್ಣಿ, ದಬ್ಬಡ್ಕ ಗ್ರಾಮದ ಅಧ್ಯಕ್ಷ ಯತೀಶ್ ಕೆದಂಬಾಡಿ, ಹರಿ, ಸಂಪಾಜೆ ಗೌತಮ್, ಕಟ್ಟಪಳ್ಳಿ ಘಟಕದ ಅಧ್ಯಕ್ಷ ಪ್ರಕಾಶ್, ಉಂಬಾಳೆ ಘಟಕದ ಅಧ್ಯಕ್ಷ ದಿನೇಶ್ ಕುಮಾರ್, ಗ್ರಾಮದ ಹಿರಿಯರಾದ ದೇವಂಗೋಡಿ ಅಚ್ಚಪ್ಪ, ಕುಮಾರ್, ಸುನಿಲ್ ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

? ಕುಡೆಕಲ್ ಸಂತೋಷ್