ಗುಡ್ಡೆಹೊಸೂರು, ಅ. ೨: ಸುಂಟಿಕೊಪ್ಪ ಹೋಬಳಿಯ ಅಂದಗೋವೆ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಾವಯವ ಪ್ರಮಾಣೀಕರಣ ಸಂಸ್ಥೆ ವತಿಯಿಂದ ಶ್ರೀರಾಮ ಸಾವಯವ ಕೃಷಿ ಸಂಘ ಕಾನ್‌ಬೈಲ್ ಮತ್ತು ಶ್ರೀ ಬಸವೇಶ್ವರ ಸಾವಯವ ಕೃಷಿ ಸಂಘ ಅಂದಗೋವೆ ವತಿಯಿಂದ ರೈತರಿಗೆ ಸಾವಯವ ಕೃಷಿ ಅಳವಡಿಕೆ ಮತ್ತು ಸಾವಯವ ಪ್ರಮಾಣೀಕರಣ ಕುರಿತು ತರಬೇತಿ ಕಾರ್ಯಕ್ರಮ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಕ್ಕಡ ಸಿ. ಚೋಮುಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಕೊಡಗರಹಳ್ಳಿ ಭಾಗವಹಿಸಿದ್ದರು.

ಪಂಚಾಯಿತಿ ಸದಸ್ಯೆ ನಿರತ, ಗ್ರಾಮ ಸಮಿತಿ ಅಧ್ಯಕ್ಷ ಎಂ.ಪಿ. ಕಾವೇರಪ್ಪ ಮತ್ತು ಶ್ರೀರಾಮ ಸಾವಯವ ಕೃಷಿ ಸಂಘದ ಅಧ್ಯಕ್ಷ ಸಿ.ಪಿ. ತಿಮ್ಮಯ್ಯ ಹಾಜರಿದ್ದರು. ವಿಷಯ ತಜ್ಞರಾಗಿ ಆಗಮಿಸಿದ ಡಾ. ದೇವಯ್ಯ - ಕೃಷಿ ವಿಜ್ಞಾನ ಕೇಂದ್ರ ಗೋಣಿಕೊಪ್ಪ, ಸಾವಯವ ಕೃಷಿ ಅಳವಡಿಕೆ ಗುಂಪು ಪ್ರಮಾಣೀಕರಣ ಬಗ್ಗೆ ಮಾಹಿತಿ ನೀಡಿದರು.

ಇನ್ನೋರ್ವ ವಿಜ್ಞಾನಿ ಡಾ. ವೀರೇಂದ್ರ ಕುಮಾರ್ ಸಾವಯವ ಕೃಷಿಯಲ್ಲಿ ಕಾಫಿ ಕಾಳುಮೆಣಸು ಅಡಿಕೆ ಬೆಳೆಗಳ ನಿರ್ವಹಣೆ ಬಗ್ಗೆ ಮತ್ತು ಜೈವಿಕ ತಂತ್ರಜ್ಞಾನದ ಬಗ್ಗೆ ತಿಳಿಸಿದರು. ನಂತರ ಪ್ರಗತಿಪರ ಸಾವಯವ ಕೃಷಿಕ ರಾದ ಹೆಚ್.ಎಸ್. ರಾಜಶೇಖರ್ ಮರೂರು ಅವರು ಸಾವಯವ ಕೃಷಿ ಮತ್ತು ನಾಟಿ ಔಷಧಿಗಳ ಉಪಯೋಗದ ಬಗ್ಗೆ ತಿಳಿಸಿದರು. ಸುಂಟಿಕೊಪ್ಪ ಕೃಷಿ ಅಧಿಕಾರಿ ಮನಸ್ವಿ ಅವರು ಇಲಾಖೆಯಲ್ಲಿ ದೊರೆಕುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾಫಿ ಮಂಡಳಿ ವಿಸ್ತರಣಾಧಿ ಕಾರಿಗಳಾದ ಲಕ್ಷಿö್ಮಕಾಂತ ಮತ್ತು ಕೃಷ್ಣಕುಮಾರ್ ಕಾಫಿ ಮಂಡಳಿಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಐಸಿಎಸ್ ಮ್ಯಾನೇಜರ್ ಲೋಕೇಶ್ ಸ್ವಾಗತಿಸಿದರು.

ಸಾವಯವ ಆಂತರಿಕ ನಿರೀಕ್ಷಣಾ ವ್ಯವಸ್ಥಾಪಕ ಪುಟ್ಟಸ್ವಾಮಿ ಕೆ. ನಿರೂಪಿಸಿ, ವಂದಿಸಿದರು.