ಮಡಿಕೇರಿ, ಸೆ. ೩೦: ರೈತರು ಉಪಯೋಗಿಸುವ ಹತ್ತು ಹೆಚ್‌ಪಿ ಸಾಮರ್ಥ್ಯದವರೆಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲು ಪ್ರಯತ್ನಿಸಲಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ರೈತರಿಗೆ ಉಚಿತ ವಿದ್ಯುತ್ ಕಲ್ಪಿಸುವ ಯೋಜನೆಯಲ್ಲಿ ಕಾಫಿ ಕೃಷಿ ಸೇರಿರಲಿಲ್ಲ. ಈ ಬಗ್ಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್‌ನಲ್ಲಿ ಈ ಬಗ್ಗೆ ಸೇರ್ಪಡೆ ಮಾಡಲಾಗಿದೆ. ಆದರೆ ವ್ಯವಸ್ಥಿತವಾಗಿ ಮಾಡಲು ಸಾಧ್ಯವಾಗಿಲ್ಲ. ವಿದ್ಯುತ್ ಇಲಾಖೆಯ ಕೆ.ಆರ್.ಇ.ಎ. ಮಂಡಳಿಯಲ್ಲಿ ಕಾಫಿ ವಾಣಿಜ್ಯ ಬೆಳೆಯೆಂದು ತೀರ್ಮಾನಿಸಿ ಒಪ್ಪಿಗೆ ನೀಡಿಲ್ಲ. ಇದಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ವಿದ್ಯುತ್ ಮೋಟಾರ್ ಬಳಸುತ್ತಿರುವ ರೈತರಿಗೆ ನೋಟೀಸ್ ನೀಡುತ್ತಿರುವುದು, ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಮಾಡದಂತೆ ಹಾಗೂ ಹಳೆಯ ಬಾಕಿ ಇರುವ ಬಿಲ್‌ಗಳನ್ನು ವಸೂಲಾತಿ ಮಾಡದಂತೆ ಇಂಧನ ಸಚಿವರ ಗಮನಕ್ಕೆ ತಂದಿದ್ದು, ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಕೆಆರ್‌ಇಎ ತೀರ್ಮಾನವನ್ನು ಬದಲಿಸಲು ಕಾಫಿ ಬೆಳೆಯುವ ಎಲ್ಲ ಕ್ಷೇತ್ರಗಳ ಶಾಸಕರು ಒಟ್ಟಾಗಿ ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

ಅರಣ್ಯ ಇಲಾಖೆ ಅಡ್ಡಿ

ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನ, ಅಬಕಾರಿ ಭವನಗಳ ನಿರ್ಮಾಣ ಕಾರ್ಯ ವಿಳಂಬಕ್ಕೆ ಅನುದಾನದ ಕೊರತೆ ಕಾರಣ ಎಂದ ಶಾಸಕರು, ಮಹಿಳಾ ಕಾಲೇಜಿಗೆ ಜಾಗ ಗುರುತಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅದೂ ಅಲ್ಲದೆ ಹಾರಂಗಿ ಮುಳುಗಡೆ ಪ್ರದೇಶಕ್ಕೆ ಸಂಬAಧಿಸಿದAತೆ ಈಗಾಗಲೇ ಅರಣ್ಯ ಇಲಾಖೆ ಜಾಗ ನೀಡಲಾಗಿದ್ದರೂ, ಕೆಲವರು ತಪ್ಪು ಮಾಹಿತಿಯೊಂದಿಗೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರಿಂದ ಹೆಚ್ಚುವರಿಯಾಗಿ ಜಾಗ ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ.

ಈಗಾಗಲೇ ನಿವೃತ್ತ ಸೈನಿಕರು ಹಾಗೂ ಕುಟುಂಬದವರಿಗೆ ೫ ಎಕರೆ ಜಾಗ ನೀಡುವ ಬಗ್ಗೆ ತೀರ್ಮಾನವಾಗಿದ್ದು, ಕುಟುಂಬದ ವಾರ್ಷಿಕ ಆದಾಯ ೮ ಲಕ್ಷದೊಳಗಿರುವವರಿಗೆ ಜಾಗ ಸಿಗಲಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಇದ್ದರು.