ಕರಿಕೆ, ಅ. ೧: ತೀವ್ರ ಹದಗೆಟ್ಟಿದ್ದ ಭಾಗಮಂಡಲ- ಕರಿಕೆ ಅಂತರ್ ರಾಜ್ಯ ಹೆದ್ದಾರಿ ಇದೀಗ ದುರಸ್ತಿ ಕಾಣುತ್ತಿದೆ. ೨೦೧೮-೧೯ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂಪಾಜೆ ರಸ್ತೆ ಕಡಿತಗೊಂಡ ಸಂದರ್ಭ ದ.ಕ., ಕೇರಳ, ಕೊಡಗನ್ನು ಸಂಪರ್ಕಿಸಲು ಪ್ರಮುಖ ಕೊಂಡಿಯಾಗಿ ಈ ರಸ್ತೆಯನ್ನು ಸರಕಾರ ಗುರುತಿಸಿತ್ತು, ಮಾತ್ರವಲ್ಲದೆ ಖಾಸಗಿ ವಾಹನಗಳು ಕೂಡ ಇದೇ ಮಾರ್ಗವಾಗಿ ಮಂಗಳೂರು- ಸುಳ್ಯ- ಮಡಿಕೇರಿ ಬಸ್ ಸಂಚಾರ ಕೂಡ ಆರಂಭಿಸಿದವು. ಇದರ ಪರಿಣಾಮ ರಸ್ತೆ ತೀವ್ರ ಹಾನಿಯಾಗಿತ್ತು. ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಸರಕಾರದ ಮಟ್ಟದಲ್ಲಿ ಗಮನ ಸೆಳೆದು ಈ ರಸ್ತೆಯನ್ನು ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಲ್ಲಿ ಸಫಲರಾಗಿದ್ದು, ಕಳೆದ ಬಾರಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಿಸಿರಲಿಲ್ಲ, ಅಲ್ಲದೇ ಸುಮಾರು ಐದೂವರೆ ಕೋಟಿ ವೆಚ್ಚದಲ್ಲಿ ಹಿಂದೆ ಟೆಂಡರ್ ಆಗಿದ್ದ ಡಾಂಬರೀಕರಣ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗಿತ್ತು. ತೀವ್ರ ಹದಗೆಟ್ಟ ಎರಡೂವರೆ ಕಿ.ಮಿ.ನಷ್ಟು ರಸ್ತೆ ಮಳೆಹಾನಿ ಪರಿಹಾರ ಅನುದಾನ ದಡಿಯಲ್ಲಿ ಗುತ್ತಿಗೆದಾರರೊಬ್ಬರಿಗೆ ಒಂದು ಕೋಟಿಗೆ ಟೆಂಡರ್ ಆಗಿದ್ದರೂ ಕಾಮಗಾರಿ ಆರಂಭ ಮಾಡದ ಹಿನ್ನಲೆಯಲ್ಲಿ ಇದೀಗ ಗುತ್ತಿಗೆ ರದ್ದು ಮಾಡಿ ಮರುಟೆಂಡರ್ಗೆ ಇಲಾಖೆ ಕ್ರಮ ವಹಿಸಿದೆ. ಅಲ್ಲದೆ ಈ ಬಾರಿಯ ಮಳೆಹಾನಿ ಕಾಮಗಾರಿಯಲ್ಲಿ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಎರಡು ತಡೆ ಗೋಡೆಗಳ ಕಾಮಗಾರಿ ಪೂರ್ಣಗೊಂಡಿದ್ದು, ನಾಲ್ಕು ಮೋರಿಗಳ ಕೆಲಸ ಪ್ರಗತಿಯಲ್ಲಿದೆ. ಸ್ಥಳಕ್ಕೆ ಲೋಕೋಪ ಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಮ್, ಕಿರಿಯ ಅಭಿಯಂತರ ದೇವರಾಜ್ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ರಸ್ತೆಯಲ್ಲಿನ ಕಾಡು ಕಡಿದು ಗುಂಡಿಮುಚ್ಚಲು ಟೆಂಡರ್ ಆಗಿದ್ದು ಇದೀಗ ಕಾಮಗಾರಿ ಪ್ರಾರಂಭಿಸಿರುವುದಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಮ್ ‘ಶಕ್ತಿ'ಗೆ ಮಾಹಿತಿ ನೀಡಿದ್ದಾರೆ. ಕೆಲ ವರ್ಷಗಳಿಂದ ಹದಗೆಟ್ಟ ಅಂತರ್ ರಾಜ್ಯ ಹೆದ್ದಾರಿ ಭಾಗಮಂಡಲ ದಿಂದ ಕರಿಕೆಯ ಕೇರಳ ಗಡಿಗೆ ಮೂವತ್ತು ಕಿ.ಮಿ.ದೂರ ಹೊಂದಿದ್ದು ಎರಡು- ಮೂರು ಕಿ.ಮೀ.ನಷ್ಟು ಡಾಂಬರೀಕರಣ ಗೊಂಡಲ್ಲಿ ಪ್ರಯಾಸದಾಯಕ ಪ್ರಯಾಣ ಸಮಸ್ಯೆ ಬಗೆಹರಿದಂತಾಗುವುದರಲ್ಲಿ ಸಂದೇಹವಿಲ್ಲ. ಇದೀಗ ಅಭಿವೃದ್ಧಿ ಯತ್ತ ಸಾಗುತ್ತಿರುವದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
- ಸುಧೀರ್ ಹೊದ್ದೆಟ್ಟಿ.