ವೀರಾಜಪೇಟೆ, ಸೆ. ೩೦: ಪ.ಪಂ. ಕಚೇರಿಗೆ ಪೀಠೋಪಕರಣ ಖರೀದಿಯಲ್ಲಿ ಲಕ್ಷಾಂತರ ರೂಪಾಯಿ ದುರುಪಯೋಗ ಆಗಿದ್ದು, ಲೋಕಾಯುಕ್ತ ತನಿಖೆ ನಡೆಸುವಂತೆ ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಸಿ.ಕೆ ಪ್ರಥ್ವಿನಾಥ್ ಸಭೆಗೆ ಮಾಹಿತಿ ನೀಡಿ ಇತ್ತೀಚೆಗೆ ಪಂಚಾಯಿತಿ ಕಚೇರಿಗೆ ಬೆಂಗಳೂರಿನ ಗ್ಲಾಸ್‌ಝೋನ್ ಎಂಬ ಸಂಸ್ಥೆಯಿAದ ಪೀಠೋಪಕರಣಗಳನ್ನು ಖರೀದಿಸಲಾಗಿದೆ. ಪೀಠೋಪಕರಣ ಗಳ ಮೂಲ ಬೆಲೆಗಿಂತ ಮೂರು ಪಟ್ಟು ಹೆಚ್ಚಿಗೆ ನೀಡಲಾಗಿದೆ. ಕಾನೂನಿನ ಪ್ರಕಾರ ಯಾವುದೇ ವಸ್ತುವನ್ನು ೧೦ ಸಾವಿರ ಮೇಲ್ಪಟ್ಟು ಖರೀದಿ ಮಾಡಬೇಕಾದರೆ ಇ-ಟೆಂಡರ್ ಮೂಲಕ ಮಾಡಬೇಕು. ಆಡಳಿತ ಭ್ರಷ್ಟಾಚಾರದಿಂದ ಕೂಡಿದ್ದು ಈ ಪ್ರಕರಣವನ್ನು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸಭೆಗೆ ತಿಳಿಸಿದಾಗ ಆಡಳಿತ, ವಿರೋಧ ಪಕ್ಷದ ಸದಸ್ಯರು ಸಹಮತ ವ್ಯಕ್ತ ಪಡಿಸಿದರು. ನಾಮಕರಣ ಸದಸ್ಯರಾದ ಕೂತಂಡ ಸಚಿನ್, ಸುನೀತಾ ತನಿಖೆಗೆ ಆಗ್ರಹಿಸಿದರು.

ಅಂಗಡಿಗಳಿಗೆ ನೋಟೀಸ್

ಕಾಂಗ್ರೆಸ್‌ನ ರಂಜಿ ಪೂಣಚ್ಚ ಪ್ರಸ್ತಾಪಿಸಿ; ಹಲವಾರು ಜನರು ತೆರಿಗೆ ಬಾಕಿ ಉಳಿಸಿ ಕೊಂಡಿದ್ದಾರೆ. ಮಳಿಗೆಗಳ ಬಾಡಿಗೆ ಸರಿಯಾಗಿ ಪಾವತಿಸುತ್ತಿಲ್ಲ. ಪಂಚಾಯಿತಿಯಲ್ಲಿ ಎಷ್ಟು ಮಳಿಗೆಗಳಿದೆ. ಬಾಡಿಗೆ ಎಷ್ಟು ಬಾಕಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ಚಂದ್ರಕುಮಾರ್ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ೧೧೦ ಮಳಿಗೆಗಳಿದ್ದು, ಮಳಿಗೆ ಪಡೆದುಕೊಂಡ ಹಲವಾರು ಜನರು ಬಾಡಿಗೆ ಪಾವತಿಸುತ್ತಿಲ್ಲ. ಇದರಿಂದ ಖಜಾನೆ ಬರಿದಾಗಿದೆ. ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳ ಲಕ್ಷಾಂತರ ರೂಪಾಯಿಗಳ ಬಾಡಿಗೆ ಹಣ ಬಾಕಿ ಇದ್ದು ಕೂಡಲೇ ಬಾಡಿಗೆ ಪಾವತಿಸದಿದ್ದರೆ ನೋಟೀಸ್ ಜಾರಿ ಮಾಡಿ ಅಂಗಡಿ ಮಳಿಗೆಗಳಿಗೆ ಬೀಗ ಹಾಕಲಾಗುವುದು ಎಂದು ಉತ್ತರಿಸಿದರು. ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಸದಸ್ಯ ಮತೀನ್ ಏಕಾಏಕಿ ನೋಟೀಸ್ ಜಾರಿ ಮಾಡಿ ಬೀಗ ಹಾಕಲು ಸಾಧ್ಯವಿಲ್ಲ. ಬಹುತೇಕ ಮಳಿಗೆಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಬೀಗ ಹಾಕುವ ಪ್ರಶ್ನೆ ಇಲ್ಲ ಎಂಬ ವಿರೋಧದ ನಡು ವೆಯೂ ನೋಟೀಸ್ ನೀಡುವಂತೆ ನಿರ್ಣಯ ಮಾಡಲಾಯಿತು.

ಮೀನು ಮಾರುಕಟ್ಟೆ ತನಿಖೆಗೆ

ಕಾಂಗ್ರೆಸ್‌ನ ರಾಜೇಶ್ ಮಾತನಾಡಿ ಮೀನು ಮಾರುಕಟ್ಟೆ ಯನ್ನು ನಿರ್ಮಿತಿ ಕೇಂದ್ರದವರು ನಿರ್ಮಿಸುತ್ತಿದ್ದಾರೆ. ಅದು ಸಂಪೂರ್ಣ ಕಳಪೆಯಾಗಿ ದನದ ಕೊಟ್ಟಿಗೆ ರೀತಿಯಲ್ಲಿದೆ. ಅದರ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್‌ನ ಮಹಮದ್ ರಾಫಿ ಮಾತನಾಡಿ ವಿದ್ಯಾನಗರದದಲ್ಲಿ ತೋಡು ಒತ್ತುವರಿಯಾಗಿದೆ. ಹಲವಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ತೋಡು ಉಕ್ಕಿ ಹರಿದು ಮನೆಗಳಿಗೆ ನೀರು ಸೇರುತ್ತಿದೆ. ತೋಡಿನ ಮೇಲೆ ಒಬ್ಬರು ಕಟ್ಟಡ ನಿರ್ಮಿಸುತ್ತಿದ್ದಾರೆ. ಪಂಚಾಯಿತಿಯಿAದ ಪರವಾನಿಗೆ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಅಭಿಯಂತರ ಹೇಮಕುಮಾರ್ ಸ್ಥಳ ಪರಿಶೀಲನೆ ನಡೆಸಲಾಗಿದೆ. ತೋಡಿನಿಂದ ೬ ಅಡಿ ಬಿಟ್ಟಿದ್ದಾರೆ. ಅಕ್ರಮವಾಗಿ ಕಟ್ಟುತ್ತಿದ್ದ ತಡೆಗೋಡೆಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.

ವಾರ್ಡ್ನಲ್ಲಿ ಕತ್ತಲು

ರಾಜೇಶ್ ಮಾತನಾಡಿ ವಿದ್ಯುತ್ ಬಿಲ್‌ಗೆ ವಾರ್ಷಿಕ ೧.೧೮ ಸಾವಿರ ವ್ಯಯ ಮಾಡಲಾಗುತ್ತಿದೆ. ಆದರೆ ಯಾವ ವಾರ್ಡ್ಗಳಲ್ಲಿ ದೀಪ ಉರಿಯುತಿಲ್ಲ. ಗುತ್ತಿಗೆದಾರನಿಗೆ ಹೇಳಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ಸಭೆಗೆ ತಿಳಿಸಿದಾಗ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿ ಗುತ್ತಿಗೆದಾರರನ್ನು ಸಭೆಗೆ ಕರೆಸುವಂತೆ ಪಟ್ಟು ಹಿಡಿದರು. ಗುತ್ತಿಗೆದಾರರ ಬದಲು ವಿದ್ಯುತ್ ಕರ್ಮಿ ಸಭೆಗೆ ಬಂದು ಅವರಿಂದ ಮಾಹಿತಿ ಬಯಸಿದಾಗ ಸಭೆಯಲ್ಲಿ ಉಡಾಫೆ ಉತ್ತರ ನೀಡಿದರು. ಎಲ್ಲಾ ಸದಸ್ಯರು ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಸೂಚಿಯAತೆ ಅಜೆಂಡಾದಲ್ಲಿ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದ ಸಿ.ಕೆ ಪ್ರಥ್ವಿನಾಥ್ ಅವರನ್ನು ಬಿಜೆಪಿ ಸದಸ್ಯ ಸುಬಾಷ್ ಮಹಾದೇವ್ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾಗ ಪ್ರಥ್ವಿನಾಥ್ ಹಾಗೂ ಜೆಡಿಎಸ್ ಮತೀನ್ ಅವರನ್ನು ತರಾಟೆಗೆ ತೆಗೆದುಕೊಂಡಾಗ ಕೆಲಕಾಲ ಸಭೆ ಗೊಂದಲದ ಗೂಡಾಯಿತು.

ನಾಯಿ ಹಿಡಿಯಲು ಕ್ರಮ

ಪಟ್ಟಣದಲ್ಲಿ ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕ್ರಮ ಕೈಗೊಳ್ಳಲು ಆಡಳಿತ ಪಕ್ಷ ವಿಫಲವಾಗಿದೆ ಎಂದು ರಾಫಿ ಸಭೆಗೆ ತಿಳಿಸಿದರು. ಈ ವಿಷಯಕ್ಕೆ ಸಂಬAಧ ಪಟ್ಟಂತೆ ಮುಖ್ಯಾಧಿಕಾರಿ ಮಾತನಾಡಿ ನಾಯಿ ಹಿಡಿಯುವವರು ಸಿಗುತ್ತಿಲ್ಲ. ಸಂಘ ಸಂಸ್ಥೆ ಹಾಗು ಪಶುವೈದ್ಯಾಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಾರ್ಮಿಕರಿಗೆ ಕಳಪೆ ಆಹಾರ

ಸದಸ್ಯೆ ದೇಚಮ್ಮ ಕಾಳಪ್ಪ ಮಾತನಾಡಿ ಪಟ್ಟಣ ಪಂಚಾಯಿತಿಯ ನೈರ್ಮಲ್ಯ ಕೆಲಸ ನಡೆಸುವ ಪೌರ ಕಾರ್ಮಿಕರಿಗೆ ನೀಡುವ ಬೆಳಗಿನ ಉಪಹಾರ ಕಳಪೆಯಾಗಿದೆ. ಅವರಿಗೆ ಬೇಕಾದ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಕಳಪೆ ಆಹಾರ ನೀಡುವ ಬಗ್ಗೆ ಬಹುತೇಕ ಕಾರ್ಮಿಕರು ಲಿಖಿತವಾಗಿ ದೂರು ನೀಡಿದ್ದಾರೆ ಇದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ನಮ್ಮ ಗಮನಕ್ಕೆ ಬಂದಿದೆ. ಕಳಪೆ ಆಹಾರ ನೀಡುವ ಗುತ್ತಿಗೆದಾರರನ್ನು ಬದಲಾಯಿಸಲಾಗುವುದು ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜೂನಾ ಸುನೀತಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.