ಮಡಿಕೇರಿ, ಅ. ೧: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಪಿ.ಆರ್. ಸುನಿಲ್ ಎಂಬವರು ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಎಂಬವರಿಗೆ ಮಾನಸಿಕವಾಗಿ ಕಿರುಕುಳ ನೀಡುವದಲ್ಲದೆ, ಅಧ್ಯಕ್ಷರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾರೆ. ಇವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಜೆ. ದಾಮೋದರ್, ಖಜಾಂಚಿ ಗಾಯತ್ರಿ ಹಾಗೂ ಸದಸ್ಯರುಗಳು ಸದಸ್ಯ ಸುನಿಲ್ ಅಧ್ಯಕ್ಷರ ಬಗ್ಗೆ ಕೀಳುಮಟ್ಟದಿಂದ ವರ್ತಿಸುತ್ತಿದ್ದಾರೆ. ಅಧ್ಯಕ್ಷರೆಂಬ ಗೌರವ ತೋರದೆ ಕಾರ್ಯಕ್ರಮಗಳಲ್ಲಿ ಅಗೌರವ ತೋರುತ್ತಿದ್ದಾರೆ. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವಮಾನವಾದಂತಾಗಿದೆ. ಕ್ಷೇತ್ರದ ಶಾಸಕರ ಬಗ್ಗೆ ಗೌರವವಿದ್ದು, ಸಮಿತಿ ವತಿಯಿಂದ ಶಾಸಕರ ಬಳಿ ನಿಯೋಗ ತೆರಳಿ ಇಂತಹ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಮನವಿ ಮಾಡಲಾಗುವುದು. ಉಚ್ಚಾಟನೆ ಮಾಡದಿದ್ದಲ್ಲಿ ಸಮಿತಿ ವತಿಯಿಂದ ಸುಂಟಿಕೊಪ್ಪದಲ್ಲಿ ಪ್ರತಿಭಟನೆ ಮಾಡಲಾಗುವದೆಂದು ಎಚ್ಚರಿಕೆ ನೀಡಿದ್ದಾರೆ.