ನವದೆಹಲಿ, ಸೆ. ೩೦: ಚೀನಾದೊಂದಿಗೆ ಲಡಾಕ್ ಗಡಿ ಸಂಘರ್ಷದ ಪ್ರಮುಖ ಘಟ್ಟದ ಸಮಯದಲ್ಲಿ ಲಡಾಕ್ ವಲಯದಲ್ಲಿ ವಾಯುಪಡೆ ಉಸ್ತುವಾರಿ ವಹಿಸಿಕೊಂಡಿದ್ದ ಯುದ್ಧ ವಿಮಾನ ಪೈಲಟ್ ಏರ್‌ಚೀಫ್ ಮಾರ್ಷಲ್ ವಿವೇಕ್‌ರಾಮ್ ಚೌಧರಿ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಬದೌರಿಯಾ ಅವರಿಂದ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ, ೪೨ ವರ್ಷಗಳ ಸುದೀರ್ಘ ಸೇವಾವಧಿ ನಂತರ ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಬದೌರಿಯಾ ನಿವೃತ್ತಿ ಹೊಂದುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ೩೬ ರಫೇಲ್ ಯುದ್ಧ ವಿಮಾನಗಳು ಮತ್ತು ೮೩ ಮಾರ್ಚ್ ೧ ಎ ಸ್ವದೇಶಿ ತೇಜಸ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು ಮುಖ್ಯವಾಗಿತ್ತು. ಭೂ ಮತ್ತು ವಾಯುಸೇನಾ ಕೇಂದ್ರಗಳಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಏರ್‌ಚೀಫ್ ಮಾರ್ಷಲ್ ವಿವೇಕ್‌ರಾಮ್ ಅವರು ಚೀನಾದೊಂದಿಗೆ ಗಡಿ ಸಂಘರ್ಷ ಮುಂದುವರಿದಿರುವ ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಿಕ್ಕಟ್ಟು ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ದೇಶದ ವಾಯುಪಡೆಗೆ ಸದ್ಯದಲ್ಲಿಯೇ ಸೇರ್ಪಡೆಯಾಗಲಿರುವ ರಷ್ಯಾದಿಂದ ಎಸ್-೪೦೦ ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳ ಕಾರ್ಯನಿರ್ವಹಣೆಯ ಜವಾಬ್ದಾರಿ ಕೂಡ ಹೊರಲಿದ್ದಾರೆ. ಸದ್ಯದ ಭವಿಷ್ಯದಲ್ಲಿ ಹಲವು ಸ್ವದೇಶಿ ಮತ್ತು ವಿದೇಶಿ ಮೂಲದ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿರುವುದರಿಂದ ಯುದ್ಧ ವಿಮಾನಗಳ ಆಧುನೀಕರಣಕ್ಕೆ ಕಾರಣಕರ್ತರಾಗಿರುತ್ತಾರೆ. ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರ ಪುತ್ರ ರಫೇಲ್ ಯುದ್ಧ ವಿಮಾನ ಪೈಲಟ್ ಆಗಿದ್ದು ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನಗಳ ಸುಗಮ ಸೇರ್ಪಡೆಗೆ ಸಹಾಯ ಮಾಡಿದ್ದಾರೆ. ಪಶ್ಚಿಮ ಏರ್ ಕಮಾಂಡರ್ ಆಗಿ ಅಂಬಾಲಾ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಿದ್ದರು.

ಇ-ಬಸ್‌ಗೆ ಸಚಿವ ಶ್ರೀರಾಮುಲು ಚಾಲನೆ

ಬೆಂಗಳೂರು, ಸೆ. ೩೦: ಬೆಂಗಳೂರು ಮಹಾನಗರ ಸಾರಿಗೆಯ (ಬಿಎಂಟಿಸಿ) ಬಹುನಿರೀಕ್ಷೆಯ ವಿದ್ಯುತ್ ಚಾಲಿತ ಬಸ್‌ಗೆ ಗುರುವಾರ ಸಾರಿಗೆ ಸಚಿವ ಬಿ. ಶ್ರೀರಾಮುಲು ಚಾಲನೆ ನೀಡಿದ್ದಾರೆ. ಕೆಂಗೇರಿಯ ಬಸ್ ಡಿಪೋದಲ್ಲಿ ಈ ವಾಹನಕ್ಕೆ ಹಸಿರು ನಿಶಾನೆ ದೊರೆತಿದೆ. ಉತ್ತರ ಪ್ರದೇಶ ಮೂಲದ ಜೆಬಿಎಂ ಆಟೋ ಲಿಮಿಟೆಡ್ ಕಂಪೆನಿ ತಯಾರಿಸಿರುವ ಈ ಬಸ್, ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸರಾಸರಿ ೨೨೦ ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ತಯಾರಾಗಿರುವ ಈ ಬಸ್ ಒಂದಕ್ಕೆ ಸುಮಾರು ರೂ. ೯೦ ಲಕ್ಷ ವೆಚ್ಚವಾಗಿದೆ. ಒಟ್ಟು ರೂ. ೧೩೦ ಕೋಟಿ ಈ ಬಸ್‌ಗಳಿಗಾಗಿ ಮೀಸಲಿಡಲಾಗಿದ್ದು, ಡಿಸೆಂಬರ್ ವೇಳೆಗೆ ಇನ್ನೂ ೯೩ ಬಸ್‌ಗಳು ರೋಡಿಗಿಳಿಯುವ ನಿರೀಕ್ಷೆಯಿದೆ. ಆರ್‌ಟಿಓ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ೩೩ ಸೀಟುಗಳ ಈ ಬಸ್ ಪ್ರಾಯೋಗಿಕವಾಗಿ ಕೆಂಗೇರಿಯಿAದ ಚಾಲನೆ ಆರಂಭಿಸಲಿದೆ. ನಂತರ, ಯಶವಂತಪುರ ಮತ್ತು ಕೆ.ಆರ್. ಪುರಂ ಡಿಪೋಗಳಲ್ಲಿ ಕೂಡ ಬಸ್‌ಗಳು ಸಂಚರಿಸಲಿವೆ. ಪ್ರತಿನಿತ್ಯ ಈ ಬಸ್‌ಗಳು ೧೮೦ ಕಿ.ಮೀ. ವೇಗ ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಈ ಬಸ್ ಅಟೊಮೆಟಿಕ್ ತಂತ್ರಜ್ಞಾನದ ಜೊತೆಗೆ, ಸಿಸಿಟಿವಿ ಕ್ಯಾಮೆರಾ, ಲೈಟ್, ಸ್ಟಾಪ್ ಸಿಗ್ನಲ್ ಹೀಗೆ ಹಲವಾರು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಇದು ಕೇವಲ ಬ್ರೇಕ್ ಹಾಗೂ ಆಟೋಮೆಟಿಕ್ ಗೇರ್ ಆಗಿರೋದ್ರಿಂದ ಚಾಲನೆ ಅತ್ಯಂತ ಸುಲಭವಾಗಲಿದೆ.

ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ಬಳಕೆ

ಬೆಂಗಳೂರು, ಸೆ. ೩೦: ಕೃಷಿ ಉತ್ಪನ್ನಗಳ ಮಾರಾಟಕ್ಕೆ ಇ-ಕಾಮರ್ಸ್ ವೇದಿಕೆಯಲ್ಲಿ ಅವಕಾಶ ದೊರೆಯಬೇಕು ಹಾಗೂ ಇದರ ನೇರ ಲಾಭ ಉತ್ಪಾದಕರಿಗೆ ದೊರೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಅವರು ಇಂದು ತಮ್ಮನ್ನು ಭೇಟಿಯಾದ ಫ್ಲಿಪ್‌ಕಾರ್ಟ್ ಸಂಸ್ಥೆಯ ರಜನೀಶ್‌ಕುಮಾರ್ ಅವರೊಂದಿಗೆ ವಿವಿಧ ವಿಷಯ ಗಳ ಕುರಿತು ಚರ್ಚಿಸಿದರು. ಫ್ಲಿಪ್ ಕಾರ್ಟ್ ಸಂಸ್ಥೆಯು ರಾಜ್ಯದಲ್ಲಿ ಸಾವಿರಾರು ಜನರಿಗೆ ಉದ್ಯೋಗ ನೀಡಿರುವುದಲ್ಲದೆ, ರೈತರು, ಸಣ್ಣ ಉತ್ಪಾದಕರಿಗೆ, ಕರಕುಶಲ ವಸ್ತುಗಳ ವ್ಯಾಪಾರಕ್ಕೆ ಅವಕಾಶ ಒದಗಿಸಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರೈತರಿಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಯೊಂದಿಗೆ ಇ-ಕಾಮರ್ಸ್ ವೇದಿಕೆ ಮೂಲಕ ಮಾರುಕಟ್ಟೆಯ ಬೇಡಿಕೆಗಳ ಕುರಿತು ಮಾಹಿತಿಯೂ ದೊರೆಯುವಂತಿರಬೇಕು. ಇದರಿಂದ ಅವರಿಗೆ ಅನುಕೂಲವಾಗುವುದು ಎಂದು ನುಡಿದರು. ರಾಜ್ಯದಲ್ಲಿ ಕೃಷಿ ಉತ್ಪನ್ನಗಳು, ಕರಕುಶಲ ಕರ್ಮಿಗಳು, ನೇಕಾರರಿಗೆ ಹೆಚ್ಚಿನ ಬೆಂಬಲ ನೀಡುವಂತೆ ಸಲಹೆ ನೀಡಿದರು. ಹತ್ತು ಕೃಷಿ ಹವಾಮಾನ ವಲಯಗಳನ್ನು ಹೊಂದಿರುವ ರಾಜ್ಯದಲ್ಲಿ ಕಾಫಿ, ಸಂಬಾರ ಪದಾರ್ಥಗಳು, ಜೋಳ, ಎಣ್ಣೆ ಬೀಜ, ತೃಣಧಾನ್ಯಗಳು ಹೀಗೆ ವೈವಿಧ್ಯಮಯ ಉತ್ಪನ್ನಗಳು ಲಭ್ಯವಿದೆ. ಇವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಕೈಜೋಡಿಸುವಂತೆ ಸಲಹೆ ನೀಡಿದರು. ಈ ಕುರಿತಂತೆ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವಂತೆ ತಿಳಿಸಿದರು. ರಾಜ್ಯದಲ್ಲಿ ಉದ್ಯೋಗ ನೀತಿ ರೂಪಿಸುವ ಮೂಲಕ ಉದ್ಯೋಗ ಸೃಜನೆ ಆಧರಿಸಿ ವಾಣಿಜ್ಯೋದ್ಯಮಗಳಿಗೆ ಉತ್ತೇಜನ ನೀಡಲು ಕ್ರಮ ವಹಿಸಲಾಗುವುದು. ಇದು ದೇಶದಲ್ಲೇ ಮೊದಲ ಪ್ರಯತ್ನ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಕಾರ್ಯದರ್ಶಿ ಗಿರೀಶ್ ಹೊಸೂರ್ ಉಪಸ್ಥಿತರಿದ್ದರು.

ವಿಮಾನ ನಿಲ್ದಾಣದಲ್ಲಿ ಮಹಿಳೆಯಿಂದ ೪ ಕೆ.ಜಿ. ಹೆರಾಯಿನ್ ವಶ

ಬೆಂಗಳೂರು, ಸೆ. ೩೦: ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ ಬರೊಬ್ಬರಿ ೪ ಕೆ.ಜಿ. ಹೆರಾಯಿನ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಆಫ್ರಿಕನ್ ಮೂಲದ ಮಹಿಳಾ ಪ್ರಯಾಣಿಕರಿಂದ ೪ ಕೆ.ಜಿ. ಹೆರಾಯಿನ್‌ಅನ್ನು ಡಿಆರ್‌ಐ ವಶಪಡಿಸಿಕೊಂಡಿದೆ. ಮೂಲಗಳ ಪ್ರಕಾರ, ನಂಬಲರ್ಹ ಮೂಲಗಳ ಮಾಹಿತಿಯ ಮೇರೆಗೆ, ಮಧ್ಯ ಪ್ರಾಚ್ಯದಿಂದ ವಿಮಾನದಲ್ಲಿ ಬಂದಿದ್ದ ಆರೋಪಿಯನ್ನು ಡಿಆರ್‌ಐ ಸಿಬ್ಬಂದಿ ತಡೆದರು. ಈ ವೇಳೆ ಆಕೆಯ ಬಳಿ ಇದ್ದ ಸುಮಾರು ೨೮ ಕೋಟಿ ಮೌಲ್ಯದ ೪ ಕೆ.ಜಿ. ಹೆರಾಯಿನ್‌ಅನ್ನು ವಶಪಡಿಸಿಕೊಂಡರು. ಆರೋಪಿಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್, ೧೯೮೫ ರ ಅಡಿಯಲ್ಲಿ ಬಂಧಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ, ಡಿಐಆರ್ ಕೆಐಎಯಿಂದಲೇ ೨೨ ಕೆ.ಜಿ. ಸೇರಿದಂತೆ ದೇಶದ ವಿವಿಧ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣಗಳಿಂದ ೭೦ ಕೆ.ಜಿ. ಹೆರಾಯಿನ್ ವಶಪಡಿಸಿಕೊಂಡಿದೆ.

ರಾಜ್ಯದಲ್ಲಿ ಕೊರೊನಾ ತುಸು ಏರಿಕೆ

ಬೆಂಗಳೂರು, ಸೆ. ೩೦: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು ಕಳೆದ ೨೪ ಗಂಟೆಯಲ್ಲಿ ೯೩೩ ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೨೯, ೭೬೦೦೦ಕ್ಕೆ ಏರಿಕೆಯಾಗಿದೆ. ೭೦೪ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾರೆ ಗುಣಮುಖರಾದವರ ಸಂಖ್ಯೆ ೨೯,೨೫,೩೯೭ ಆಗಿದೆ. ರಾಜ್ಯದಲ್ಲಿ ಸದ್ಯ ೧೨,೭೮೦ ಸಕ್ರಿಯ ಪ್ರಕರಣಗಳಿರುವುದಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ ಕೋವಿಡ್-೧೯ನಿಂದ ೧೪ ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಒಟ್ಟು ಸಂಖ್ಯೆ ೩೭,೭೯೪ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ. ೦.೮೧ ರಷ್ಟಿದ್ದು, ಮರಣ ಪ್ರಮಾಣ ಶೇ. ೧.೫೦ ರಷ್ಟಿದೆ. ಬೆಂಗಳೂರಿನಲ್ಲಿ ೨೯೧ ಹೊಸ ಪ್ರಕರಣ ಪತ್ತೆಯಾಗಿದ್ದು, ೧೭೨ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ೫ ಸೋಂಕಿತರು ಸಾವನ್ನಪ್ಪಿದ್ದಾರೆ.