(ಕಾಯಪಂಡ ಶಶಿಸೋಮಯ್ಯ)
ಮಡಿಕೇರಿ, ಅ. ೧: ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿಯಲ್ಲಿ ಇರುವ ಗಾಂಧಿ ಮೈದಾನ ಹಾಗೂ ಗಾಂಧಿ ಮಂಟಪಕ್ಕೆ ಒಂದು ಐತಿಹ್ಯವಿದೆ. ಆದರೆ, ಪ್ರಸ್ತುತ ಈ ಗಾಂಧಿ ಮೈದಾನ ಹಾಗೂ ಗಾಂಧೀಜಿ ಅವರ ಪ್ರತಿಮೆ ಇರುವ ಸ್ಥಳವಾದ ಗಾಂಧಿ ಮಂಟಪವನ್ನು ಗಮನಿಸಿದರೆ, ಇಡೀ ದೇಶಮಾತ್ರವಲ್ಲ ವಿಶ್ವಖ್ಯಾತಿ ಹೊಂದಿರುವ ನಮ್ಮ ರಾಷ್ಟçದ ಪಿತಾಮಹ ಎಂದು ಗುರುತಿಸಲ್ಪಟ್ಟಿರುವ ಮಹಾತ್ಮ ಗಾಂಧೀಜಿ ಅವರ ಹೆಸರಿಗೆ ಚ್ಯುತಿ ತರುವಂತಾಗಿರುವುದು ವಿಷಾದಕರವಲ್ಲದೆ ಮತ್ತೇನು? ಭಾರತದ ಸ್ವಾತಂತ್ರö್ಯ ಸಂಗ್ರಾಮದಲ್ಲಿ ಪ್ರಮುಖರಾಗಿ ಪರಿಗಣಿಸಲ್ಪಟ್ಟಿರುವ ಮೋಹನ್ ದಾಸ್ ಕರಮ್ ಚಂದ್ ಗಾಂಧೀಜಿ ಅವರು ಸ್ವಾತಂತ್ರö್ಯ ಹೋರಾಟದ ಸಂಘಟನೆಯ ಪಾತ್ರಧಾರಿಯಾಗಿ ಕೊಡಗು ಜಿಲ್ಲೆಗೂ ಆ ಸಂದರ್ಭದಲ್ಲಿ ಭೇಟಿ ನೀಡಿದ್ದರು. ೧೯೩೪ರಲ್ಲಿ ಕೊಡಗಿಗೆ ಆಗಮಿಸಿದ್ದ ಗಾಂಧೀಜಿ ಅವರು ಜಿಲ್ಲೆಯ ಪೊನ್ನಂಪೇಟೆ ಸೇರಿದಂತೆ ಕೆಲವೆಡೆಗಳಿಗೆ ಆಗಮಿಸಿ ಮಡಿಕೇರಿಯಲ್ಲಿನ ಈ ಮೈದಾನದ ಬದಿಯ ಗುಡ್ಡದ ಮೇಲೆ ನಿಂತು ಜನರನ್ನುದ್ದೇಶಿಸಿ ಮಾತನಾಡಿದ್ದರು. ಇದರಿಂದಾಗಿ ಈ ಮೈದಾನಕ್ಕೆ ಗಾಂಧಿಮೈದಾನವೆAದು ಹೆಸರಿಸಲಾಗಿದ್ದು, ಇದೇ ಮೈದಾನದ ಒಂದು ಬದಿಯಲ್ಲಿ ಅಭಿಮಾನಿಗಳು ಸೇರಿ ಗಾಂಧೀಜಿ ಅವರ ಪ್ರತಿಮೆಯನ್ನು ತಯಾರಿಸಿ ಗಾಂಧಿ ಮಂಟಪವೆAದು ಪರಿವರ್ತಿಸಿದ್ದರು. ೧೯೫೬ರ ಸಂದರ್ಭ ಆಗಿನ ಕೊಡಗು ಸರಕಾರದ ಕೊನೆಯ ಅವಧಿಯಲ್ಲಿ ಈ ಗಾಂಧಿ ಮಂಟಪ ತಲೆ ಎತ್ತಿದೆ ಎಂಬುದು ಇತಿಹಾಸವನ್ನು ಮೆಲುಕು ಹಾಕಿದಲ್ಲಿ ತಿಳಿದುಬರುತ್ತದೆ.
ಗಾಂಧಿ ಸ್ಮಾರಕ ಭವನದ ಚಿಂತನೆ
ಈ ಸ್ಥಳವನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದರೊಂದಿಗೆ ಗಾಂಧಿ ಸ್ಮಾರಕ ಭವನವನ್ನಾಗಿ ಪರಿವರ್ತಿಸಿ ಆಕರ್ಷಣೀಯ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಕೆಲವು ದಶಕಗಳ ಹಿಂದೆ ಚಿಂತನೆಯೊAದು ಮೂಡಿತ್ತು. ಅಲ್ಲದೆ, ಇದಕ್ಕಾಗಿ ಯೋಜನೆಯೂ ರೂಪುಗೊಂಡಿತ್ತು. ಆಗ ಕೊಡಗಿನ ಜಿಲ್ಲಾಧಿಕಾರಿಯಾಗಿದ್ದ ಎಂ.ಕೆ. ಬಲದೇವ ಕೃಷ್ಣ ಅವರು ಈ ಬಗ್ಗೆ ಆಸಕ್ತಿ ಹೊಂದಿದ್ದು, ಪ್ರಸ್ತಾವಿತ ಯೋಜನೆಯನ್ನು ಸರಕಾರಕ್ಕೆ ಕಳುಹಿಸಲಾಗಿತ್ತು. ಬೆಂಗಳೂರಿನಿAದ ವಾಸ್ತುಶಿಲ್ಪಿಯೊಬ್ಬರನ್ನು ಕರೆಸಿ ಯೋಜನೆ ರೂಪಿಸಲಾಗಿತ್ತು. ಈಗಿರುವ ಮಂಟಪದ ಸುತ್ತ ಉದ್ಯಾನವನ ನಿರ್ಮಾಣ,
(ಮೊದಲ ಪುಟದಿಂದ) ರಕ್ಷಣಾ ಕೊಠಡಿ, ಚಿತಾಭಸ್ಮವನ್ನು ಇಡಲು ಜಾಗ, ಗಾಂಧಿ ಜಯಂತಿ ದಿನ ಹಾಗೂ ಪುಣ್ಯತಿಥಿ ಸಂದರ್ಭ ಜನರು ಕುಳಿತು ಸರ್ವಧರ್ಮ ಪ್ರಾರ್ಥನೆ ಸಲ್ಲಿಸಲು ಅವಕಾಶ ಈ ರೀತಿಯಂತಹ ಚಿಂತನೆಗಳನ್ನು ಮಾಡಲಾಗಿತ್ತು. ಸರಕಾರಿ ನೌಕರರ ಒಂದು ದಿನದ ವೇತನವನ್ನು ಇದಕ್ಕಾಗಿ ಪಡೆಯುವ ತೀರ್ಮಾನವೂ ಆ ಸಂದರ್ಭದಲ್ಲಿ ಆಗಿತ್ತು.
ಆದರೆ, ಹಲವು ದಶಕಗಳೇ ಕಳೆದರೂ, ಇದು ಕಾರ್ಯರೂಪಕ್ಕೆ ಮಾತ್ರ ಬರಲಿಲ್ಲ. ಸ್ವಯಂ ಸೇವಾ ಸಂಘಟನೆಯಾಗಿರುವ ಜಿಲ್ಲಾ ಸರ್ವೋದಯ ಸಮಿತಿಯೂ ಈ ನಿಟ್ಟಿನಲ್ಲಿ ಹಲವಷ್ಟು ಪ್ರಯತ್ನಗಳನ್ನು ಮಾಡಿದೆ. ಈಗಲೂ ಮಾಡುತ್ತಾ ಬರುತ್ತಿದೆ.
ನಡೆಸಲಾಗಿರುವ ಹಲವು ಪ್ರಯತ್ನಗಳು ಇನ್ನೂ ಕಾರ್ಯರೂಪಕ್ಕೆ ಬಾರದೆ ಪ್ರಯತ್ನದಲ್ಲೇ ಬಾಕಿ ಉಳಿದಿದೆ. ಈ ಹಿಂದೆ ಎಂ.ಆರ್. ಸೀತಾರಾಮ್ ಅವರು ಸಚಿವರಾಗಿದ್ದಾಗ ರೂ. ೧ ಕೋಟಿಯ ಪ್ರಸ್ತಾವನೆಯಾಗಿದ್ದು, ಇದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತ ಮಟ್ಟಕ್ಕೆ ಹೋಗಿತ್ತು. ತದ ನಂತರದಲ್ಲಿ ಜಿಲ್ಲಾ ಸರ್ವೋದಯ ಸಮಿತಿಯವರು ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು, ಅವರು ರೂ. ೫೦ ಲಕ್ಷ ಒದಗಿಸಲು ಒಪ್ಪಿಗೆ ನೀಡಿದ್ದರು.
ಈ ನಡುವೆ ಸರಕಾರದಿಂದ ಈ ಜಾಗಕ್ಕೆ ಸಂಬAಧಿಸಿದ ದಾಖಲೆ - ಹಕ್ಕು ಪತ್ರವನ್ನು ನೀಡಲು ಹಾಗೂ ಸರ್ವೆ ನಡೆಸಿ ವಿಸ್ತೃತ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಲು ಸೂಚನೆ ಬಂದಿದ್ದು, ಸರ್ವೆ ನಡೆಸಲಾಗಿದೆ ಎನ್ನಲಾಗಿದೆ. ಈ ವರದಿ ತಹಶೀಲ್ದಾರ್, ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗಬೇಕಿದೆ. ಬಳಿಕ ಕಂದಾಯ ಇಲಾಖೆಯ ಹೆಸರಿನಿಂದ ಜಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾವಣೆಯಾಗಬೇಕಾಗಿದೆ.
ಸರ್ವೋದಯ ಸಮಿತಿಯಿಂದ ಕಾರ್ಯಕ್ರಮ
ಪ್ರಸ್ತುತ ಗಾಂಧಿ ಜಯಂತಿ ಹಾಗೂ ಅವರ ಪುಣ್ಯತಿಥಿ ದಿನವಾದ ಜ.೩೦ರಂದು ಸರ್ವೋದಯ ಸಮಿತಿಯ ಮುಂದಾಳತ್ವದಲ್ಲಿ ಜಿಲ್ಲಾಧಿಕಾರಿಗಳೂ ಸೇರಿದಂತೆ ಸ್ಮರಣಾ ಕಾರ್ಯಕ್ರಮ ನಡೆಯುತ್ತಿರುವುದು ಹೊರತುಪಡಿಸಿದರೆ, ಮತ್ತಿನ್ನೇನೂ ನಡೆಯುತ್ತಿಲ್ಲ. ಈ ಎರಡು ದಿನ ಒಂದಷ್ಟು ಕಳೆಗಟ್ಟುವ ಸ್ಥಳ ಮತ್ತೆ ಕಾಡು ಆವರಿಸಿದಂತಾಗುತ್ತದೆ.
ನೆನೆಗುದಿಯಲ್ಲೇ ಉಳಿದಂತಾಗಿರುವ ಈ ಯೋಜನೆ ಸಾಕಾರಗೊಂಡು ಆಕರ್ಷಣೀಯ ಸ್ಥಳವಾಗಿ ಹಾಗೂ ರಾಷ್ಟçದ ಪಿತಾಮಹನಿಗೆ ಗೌರವ ಸೂಚಿಸುವ ಸ್ಥಳವಾಗಿ ರೂಪುಗೊಳ್ಳಲು ಇನ್ನೆಷ್ಟು ವರ್ಷಗಳು ಬೇಕಾದೀತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.