ನಾಪೋಕ್ಲು, ಸೆ. ೩೦: ಕುಟುಂಬದ ಎಲ್ಲಾ ಸದಸ್ಯರು ಪರಸ್ಪರ ಒಗ್ಗಟ್ಟಿನಿಂದ ಮತ್ತು ಸಹಬಾಳ್ವೆಯಿಂದ ಜೀವನ ನಡೆಸಿದರೆ ಮಾತ್ರ ಕುಟುಂಬದ ಅಭಿವೃದ್ಧಿ ಸಾಧ್ಯ ಎಂದು ಚೆರಿಯಪರಂಬು ಪರವಂಡ ಕುಟುಂಬದ ಫೌಂಡೇಶನ್ ನೂತನ ಅಧ್ಯಕ್ಷ ಪಿ.ಎ.ಮಹಮ್ಮದ್ ಹಾಜಿ ಕರೆ ನೀಡಿದರು.
ಚೆರಿಯಪರಂಬು ಶಾದಿ ಮಹಲ್ನಲ್ಲಿ ಕರೆಯಲಾಗಿದ್ದ ಪರವಂಡ ಕುಟುಂಬಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ನಮ್ಮ ಕುಟುಂಬದವರು ತಲೆ ತಲಾಂತರಗಳಿAದ ಇಲ್ಲಿ ವಾಸಿಸುತ್ತಿದ್ದು, ಉತ್ತಮ ಸ್ಥಾನಮಾನವನ್ನು ಹೊಂದಿದ್ದಾರೆ. ಆದರೆ, ಅವರವರ ಕೆಲಸ ಕಾರ್ಯಗಳಿಂದಾಗಿ ಎಲ್ಲರೂ ಒಟ್ಟು ಸೇರದೆ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದಾರೆ.
ಇವರೆಲ್ಲರನ್ನು ಒಂದೇ ವೇದಿಕೆಯಡಿಯಲ್ಲಿ ಒಂದುಗೂಡಿಸಿ ಕುಟುಂಬದಲ್ಲಿ ಕಷ್ಟದಲ್ಲಿರುವವರಿಗೆ ಸಹಕಾರ ನೀಡಲು ಮತ್ತು ಸಮಾಜಮುಖಿ ಕೆಲಸವನ್ನು ನಡೆಸುವ ಉದ್ದೇಶದಿಂದ ಪರವಂಡ ಫೌಂಡೇಶನ್ ಎಂಬ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯ ದ್ಯೇಯೋದ್ದೇಶಗಳಿಗೆ ಎಲ್ಲರೂ ಬದ್ಧರಾಗುವದರೊಂದಿಗೆ ಕುಟುಂಬದ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ರಚಿಸಲಾದ ನೂತನ ಸಮಿತಿ ಉಪಾಧ್ಯಕ್ಷರಾಗಿ ಪಿ.ಎ. ಹಂಸ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ. ಕರೀಂ, ಸಹ ಕಾರ್ಯದರ್ಶಿಯಾಗಿ ಪಿ.ಎ. ಹ್ಯಾರೀಸ್, ಕೋಶಾಧಿಕಾರಿಯಾಗಿ ಪಿ.ಎಂ. ಹಸೈನಾರ್ ಹಾಜಿ, ಸಮಿತಿ ಸದಸ್ಯರಾಗಿ ಪಿ.ಎಂ. ಮಮ್ಮು, ಪಿ.ಎಂ. ಅಬ್ದುಲ್ ರೆಹಮಾನ್ ಹಾಜಿ, ಪಿ.ಎಂ. ಅಬ್ದುಲ್ ರೆಹಮಾನ್, ಪಿ.ಎಂ. ಉಸ್ಮಾನ್, ಪಿ.ಎಂ. ಅಬ್ದುಲ್ ಖಾದರ್ ಹಾಜಿ, ಪಿ.ಎ. ಇಬ್ರಾಹಿಂ ಅವರನ್ನು ಆಯ್ಕೆಗೊಳಿಸಲಾಯಿತು.