ಮಡಿಕೇರಿ, ಸೆ, ೩೦: ಲಿಂಗಾನುಪಾತದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಹೇಳಿದರು.

ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ೧ ಸಾವಿರ ಗಂಡುಮಕ್ಕಳಿಗೆ ೧೦೨೨ ಹೆಣ್ಣು ಮಕ್ಕಳ ಲಿಂಗಾನುಪಾತವಿದ್ದು, ರಾಜ್ಯದಲ್ಲಿ ಮೊದಲನೆ ಸ್ಥಾನ ಪಡೆದಿದೆ ಎಂದರು. ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ೨೬ ಸ್ಕಾö್ಯನಿಂಗ್ ಸೆಂಟರ್‌ಗಳಿವೆ. ಈ ಪೈಕಿ ೨೩ ಖಾಸಗಿ ಹಾಗೂ ೩ ಸರಕಾರಿ ಸೆಂಟರ್‌ಗಳಾಗಿವೆ. ಸ್ಕಾö್ಯನಿಂಗ್ ಮಾಡುವ ತಜ್ಞರು ‘ರೆಫರಲ್ ಸ್ಲಿಪ್’ನಲ್ಲಿ ಹೆಸರು, ಕೆ.ಎಂ.ಸಿ ನೋಂದಣಿ ಸಂಖ್ಯೆ, ಉದ್ದೇಶ ಕಡ್ಡಾಯವಾಗಿ ನಮೂದಿಸಬೇಕು. ಹೊರರಾಜ್ಯ, ಜಿಲ್ಲೆಗಳಿಂದ ೨ನೇ ಅಥವಾ ೩ನೇ ಮಗುವಿನ ಸ್ಕಾö್ಯನಿಂಗ್ ಮಾಡಿಸಲು ಬರುವ ಗರ್ಣಿಣಿಯರ ಮಾಹಿತಿಯನ್ನು ಹಾಗೂ ೧೮ ವರ್ಷದ ಒಳಗಿನ ಗರ್ಭಿಣಿ ಮಾಹಿತಿಯನ್ನು ರೆಡಿಯೋಲಾಜಿಸ್ಟ್ ಕಡ್ಡಾಯವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಎಲ್ಲಾ ಸ್ಕಾö್ಯನಿಂಗ್ ಕೇಂದ್ರಗಳು ನೋಂದಣಿ ಮತ್ತು ನವೀಕರಣವನ್ನು ಕಡ್ಡಾಯವಾಗಿ ನಿಗದಿತ ಸಮಯದಲ್ಲಿ ಮಾಡಿಸುವುದು ಹಾಗೂ ಮೊಬೈಲ್ ಸ್ಕಾö್ಯನಿಂಗ್ ಸೆಂಟರ್‌ಗೆ ಅವಕಾಶವಿರುವುದಿಲ್ಲ. ಗರ್ಭಪಾತ ಮಾಡುವ ವೈದ್ಯರು ಕಡ್ಡಾಯವಾಗಿ ಜಿಲ್ಲಾ ಸಮಿತಿ ಗಮನಕ್ಕೆ ತಂದು ಒಪ್ಪಿಗೆ ಪಡೆದು ಗರ್ಭಪಾತ ಮಾಡತಕ್ಕದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶೇ. ೯೨ ಲಸಿಕಾಕರಣವಾಗಿದೆ. ಅಗತ್ಯವಿರುವಷ್ಟು ಲಸಿಕೆ ಲಭ್ಯವಿದೆ. ಲಸಿಕೆ ಪಡೆಯದವರು ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿದರು.

ಗೋಷ್ಠಿಯಲ್ಲಿ ಲಸಿಕಾಕರಣದ ನೋಡೆಲ್ ಅಧಿಕಾರಿ ಡಾ. ಗೋಪಿನಾಥ್ ಇದ್ದರು.