ಮಡಿಕೇರಿ, ಸೆ. ೨೯: ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿ ಮಡಿಕೇರಿ ಯಲ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ ಹಾಗೂ ಸಂಯೋಜಕರುಗಳ ಸಭೆ ನಡೆಯಿತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಕೆಪಿಸಿಸಿ ಮಾಧ್ಯಮ ಸಂವಹನ ವಕ್ತಾರ ಟಿ.ಪಿ. ರಮೇಶ್ ಭಾಗವಹಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ನಿರ್ದೇಶನದ ಮೇರೆಗೆ ಪಕ್ಷದ ವತಿಯಿಂದ ಭಾರತದ ಸ್ವಾತಂತ್ರ‍್ಯೋತ್ಸವದ ೭೫ನೇ ವಾರ್ಷಿಕೋತ್ಸವವನ್ನು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸುವ ಬಗ್ಗೆ ಚರ್ಚಿಸಲಾಯಿತು. ಆ ಪ್ರಯುಕ್ತ ಅಕ್ಟೋಬರ್ ೨ ರಿಂದ ಪೂರ್ತಿ ತಿಂಗಳು ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಸವಿನೆನಪಿನಲ್ಲಿ ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಹೆಸರಿನಡಿಯಲ್ಲಿ ಪಕ್ಷವು ಪ್ರತಿ ವಲಯ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳಲು ತೀರ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಹಾಗೂ ಬ್ಲಾಕ್ ಸಂಯೋಜಕರ ಉಸ್ತುವಾರಿಯಲ್ಲಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಯಶಸ್ವಿಯಾಗಿ ಆಯೋಜಿಸಿ ಇದರ ಫೋಟೋ ಹಾಗೂ ೧ ನಿಮಿಷದ ವೀಡಿಯೋವನ್ನು ಕೆಪಿಸಿಸಿಗೆ ಕಳುಹಿಸಿಕೊಡಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ, ಸ್ವಾತಂತ್ರ‍್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಇತರ ಮೇರು ನಾಯಕರ ಕೊಡುಗೆಯ ಬಗ್ಗೆ ವಿವರಿಸುವಂತೆ ತಿಳಿಸಲಾಯಿತು. ಪಕ್ಷದ ಎಲ್ಲಾಸ್ತರದ ನಾಯಕರುಗಳು ಹಾಗೂ ಕಾರ್ಯಕರ್ತರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚಿಸಲಾಯಿತು.

ಕೆಪಿಸಿಸಿ ನಿರ್ದೇಶನದಂತೆ ಪ್ರಜಾಪ್ರತಿನಿಧಿ ಕಾರ್ಯಕ್ರಮವನ್ನು ತಾ. ೩೧.೧೦.೨೦೨೧ ರೊಳಗಾಗಿ ಎಲ್ಲಾ ಹಂತ ಗಳಲ್ಲಿ ಕಡ್ಡಾಯವಾಗಿ ಪೂರ್ಣ ಗೊಳಿಸಿರುವಂತೆ ಸೂಚಿಸಲಾಯಿತು.