ಮಡಿಕೇರಿ, ಸೆ. ೨೯: ಗುಜರಾತ್ ರಾಜ್ಯದ ಸೂರತ್‌ನಲ್ಲಿ ವಾಣಿಜ್ಯ ತೆರಿಗೆ ಆಯುಕ್ತರು ಹಾಗೂ ಡೆಪ್ಯುಟಿ ಡೈರೆಕ್ಟರ್ ಆಫ್ ಫಾರಿನ್ ಅಸೆಟ್ ಇನ್‌ವೆಸ್ಟಿಗೇಷನ್ ಆಫೀಸರ್ ಆಗಿ ಕರ್ತವ್ಯ ನಿಭಾಯಿಸುತ್ತಿರುವ ಕೊಡಗಿನವರಾದ ಯುವ ಅಧಿಕಾರಿ ಡಾ. ಕೊಟ್ಟಂಗಡ ಡಿ. ಪೆಮ್ಮಯ್ಯ ಅವರನ್ನು ಆದಿ ಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಭೇಟಿಯಾಗಿ ಉಭಯಕುಶಲೋಪರಿ ನಡೆಸಿದರು.

ಸೂರತ್‌ಗೆ ಖಾಸಗಿ ಕೆಲಸದ ನಿಮಿತ್ತ ತೆರಳಿದ್ದ ಸ್ವಾಮೀಜಿಗೆ ಅಲ್ಲಿ ಕರ್ನಾಟಕದ ಮೂಲದವರಾದ ಈ ಅಧಿಕಾರಿ ಉನ್ನತ ಸ್ಥಾನದಲ್ಲಿರುವ ಬಗ್ಗೆ ಅವರ ಆಪ್ತರು ಮಾಹಿತಿ ನೀಡಿದ್ದರು. ಇದನ್ನು ಅರಿತು ಉತ್ಸುಕರಾದ ಅವರು ಪೆಮ್ಮಯ್ಯ ಅವರನ್ನು ಔಪಚಾರಿಕವಾಗಿ ಭೇಟಿಯಾಗುವ ಮೂಲಕ ಉಭಯಕುಶಲೋಪರಿ ನಡೆಸಿದ್ದು ವಿಶೇಷ.

ಈ ಸಂದರ್ಭ ಸ್ವಾಮೀಜಿಗಳು ಅಲ್ಲಿ ತಮ್ಮೊಂದಿಗಿದ್ದ ಇತರ ಹಿರಿಯ ನಿವೃತ್ತ ಅಧಿಕಾರಿಗಳಿಗೆ ಕೊಡಗಿನ ಬಗ್ಗೆ - ಸಣ್ಣ ಜನಾಂಗವಾಗಿರುವ ಕೊಡವರ ಕುರಿತು ವಿವರಿಸಿದರು. ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರನ್ನು ಉಲ್ಲೇಖಿಸಿದ ಅವರು ಪೆಮ್ಮಯ್ಯ ಅವರು ಕೂಡ ಇದೇ ಜನಾಂಗದವರಾಗಿದ್ದಾರೆ. ಅತ್ಯಲ್ಪ ಜನಸಂಖ್ಯೆ ಇರುವ ಇವರದ್ದು ವಿಶಿಷ್ಟವಾದ ಭಾಷೆ-ಆಚಾರ-ವಿಚಾರವಾಗಿದೆ ಎಂದು ತಿಳಿಸಿದರು.

ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ ಸ್ವಾಮೀಜಿಗಳು ಅವರ ಚಿಂತನೆ, ಆರೋಗ್ಯ, ಶಿಕ್ಷಣಕ್ಕೆ ನೀಡುತ್ತಿರುವ ಮಹತ್ವ, ಕೊಡಗಿನಲ್ಲಿನ ಉದ್ದೇಶಿತ ಯೋಜನೆಗಳ ಬಗ್ಗೆಯೂ ವಿವರಿಸಿ ಅಧಿಕಾರಿಗೆ ಆಶೀರ್ವಚನ ನೀಡಿದರು. ಈ ಸಂದರ್ಭ ಪೆಮ್ಮಯ್ಯ ಅವರ ತಾಯಿ ಕೊಟ್ಟಂಗಡ ವಿಜು ದೇವಯ್ಯ ಅವರು ಪುತ್ರನ ಜತೆಗಿದ್ದರು. ಈ ಬಗ್ಗೆ ಪೆಮ್ಮಯ್ಯ ಅವರು ಫೇಸ್‌ಬುಕ್ ಮೂಲಕ ಸಂತಸ ಹಂಚಿಕೊAಡಿದ್ದಾರೆ.