ಕಣಿವೆ, ಸೆ. ೩೦: ನಾವು ನಿಮ್ಮಂತೆಯೇ ಮನುಷ್ಯರು. ನಮಗೂ ಮಕ್ಕಳಿದ್ದಾರೆ. ನಮಗೂ ಕುಟುಂಬ ಎಂಬುದಿದೆ. ನಾವು ಊರಿನ ಸ್ವಚ್ಛತಾ ಸೇನಾನಿಗಳು ಹೊರತು ನಿಮ್ಮ ಸೇವಕರಲ್ಲ... ಇದು, ಸಾರ್ವಜನಿಕರಿಗೆ ಪೌರ ಕಾರ್ಮಿಕರೆಂಬ ಪ್ರತಿಯೊಬ್ಬ ಕಾಯಕ ಯೋಗಿಗಳ ವಿನಂತಿ.
ಪಟ್ಟಣದ ರಸ್ತೆ - ಚರಂಡಿಗಳಲ್ಲಿ, ಬಡಾವಣೆಯ ಗಲ್ಲಿ - ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಕಸ - ತ್ಯಾಜ್ಯ, ಬಳಸಿ ಬಿಸಾಡುವ ಪ್ಯಾಡ್ ಮೊದಲಾದ ಕೊಳಕುಗಳೇ ತುಂಬಿ ತುಳುಕುತ್ತಿರುತ್ತವೆ.
ಅಂದರೆ ನಾವು ಏನೇ ಬಿಸಾಕಿದರೂ ಕೂಡ ಸ್ವಚ್ಛಗೊಳಿಸಲು ಪಂಚಾಯಿತಿಯ ಪೌರ ಕಾರ್ಮಿಕರಿದ್ದಾರೆ ಎಂಬ ಬೇಜವಾಬ್ದಾರಿಯ ವರ್ತನೆ ತೋರುವ ಸಾರ್ವಜನಿಕರು ಅವರ ಆ ವಿನಂತಿಯನ್ನು ಒಂದು ಕ್ಷಣ ಆಲೋಚಿಸಬೇಕಾದ ಹಾಗೂ ಅವಲೋಕಿಸಬೇಕಾದ ಸಂಗತಿ.
ನಮ್ಮದೇ ಮನೆಗಳ ಮುಂದೆ ನಮ್ಮ ಬಳಕೆಯ, ನಾವೇ ಹರಿಸುವ ಸ್ನಾನದ ಮನೆ ಅಥವಾ ಮೂತ್ರಾಲಯದ ತ್ಯಾಜ್ಯಗಳನ್ನು ತೊಳೆಯಲು ನಮಗೇಕೆ ಮುಜುಗರ...?
ಯಾವುದೋ ಒಂದು ಬಡಾವಣೆಯ ಎಲ್ಲೋ ಒಂದು ಮನೆ ಮುಂದೆ ಹೆಗ್ಗಣ ಅಥವಾ ಇಲಿ ಸತ್ತು ಬಿದ್ದಿದ್ದರೆ, ಅದನ್ನು ತೆಗೆಯಲು ಪಂಚಾಯಿತಿಗೆ ಕರೆ ಮಾಡುತ್ತೇವೆ. ಮನೆಯಲ್ಲಿ ತಿಂದು ಉಂಡು ಉಳಿದ ತಿನಿಸು ತುಂಬಿದ ಬಕೆಟೊಂದು ಮನೆಯೊಳಗಿದ್ದು ಕಸ ಸಂಗ್ರಹಿಸುವ ಆಟೋ ಅಥವಾ ಪಂಚಾಯಿತಿ ಟ್ರಾಕ್ಟರ್ ಬರಲಿಲ್ಲ ಅಂದರೆ ಅದಕ್ಕೂ ಕೆಲವರು ಪಂಚಾಯಿತಿಗೆ ಕರೆ ಮಾಡುತ್ತಾರೆ.
ಇನ್ನು ಕೆಲವರು ಪ್ಲಾಸ್ಟಿಕ್ಗಳಲ್ಲಿ ತುಂಬಿಸಿ ರಾತ್ರಿಯಾಗುವುದನ್ನೇ ಕಾದು ಮತ್ತೊಬ್ಬರ ಮನೆಗೆ ವಾಸನೆ ರಾಚುವಂತೆ ರಸ್ತೆ ಬದಿಯಲ್ಲೋ ಚರಂಡಿಯೊಳಕ್ಕೋ ಬಿಸಾಕಿ ಬರುವವರೂ ಇದ್ದಾರೆ. ಆದರೆ ಎಲ್ಲರೂ ಒಂದು ಸತ್ಯವನ್ನು ಅರಿಯಬೇಕು.
ಪೌರ ಕಾರ್ಮಿಕರೆಂಬ ಕಾಯಕ ಯೋಗಿಗಳು ಒಂದು ವಾರ ರಜೆ ಮಾಡಿದರೆ ನಗರ, ಪಟ್ಟಣ ಪ್ರದೇಶಗಳ ಜನರ ಸ್ಥಿತಿ ಚಿಂತಾಜನಕವಾಗಿಬಿಡುತ್ತದೆ.
ಪ್ರತಿ ದಿನ ಕೋಳಿ ಕೂಗುವ ಮೊದಲೇ ನಿದ್ರೆಯಿಂದ ಮೇಲೆದ್ದು ಕೈಯಲ್ಲಿ ಪೊರಕೆ ಅಥವಾ ಕಸ ಕೆರೆವ ಗುದ್ದಲಿಗಳೊಂದಿಗೆ ನಿದ್ರೆಯ ಕಣ್ಣುಗಳನ್ನು ಹೊಸಕಿಕೊಂಡು ತಮ್ಮ ದೈನಂದಿನ ಸತ್ಯ ಶುದ್ಧ ಕಾಯಕವನ್ನು ಮಾಡುವ ಈ ಕಾಯಕ ಯೋಗಿಗಳಿಂದಲೇ ವಾತಾವರಣ ಹಾಗೂ ಪರಿಸರ ಸ್ವಚ್ಛವಾಗಿರುವುದು.
ಸಾರ್ವಜನಿಕರ ಮತ್ತು ಆ ನಗರಗಳ ನೈರ್ಮಲ್ಯಗಳನ್ನು ಕಾಪಾಡುತ್ತಿರುವ ಈ ಕಾಯಕ ಯೋಗಿಗಳನ್ನು ಇನ್ನಾದರೂ ಪ್ರತಿಯೊಬ್ಬರು ಗೌರವದಿಂದ ನೋಡಬೇಕಿದೆ.
ಕುಶಾಲನಗರದ ಹಲವು ರಸ್ತೆಗಳಲ್ಲಿ ಅದರಲ್ಲೂ ರಥ ಬೀದಿಯ ರಸ್ತೆಯ ಉದ್ದಕ್ಕೂ ಕಸ ತ್ಯಾಜ್ಯ ಬಿಸಾಕಿರುವ ಚಿತ್ರಣ ನಿತ್ಯವೂ ಕಂಡುಬರುತ್ತದೆ. ಜೊತೆಗೆ ಪಾನಿಪೂರಿ - ಮಸಾಲೆ ಪೂರಿ, ಚುರು ಮುರಿ, ಗೋಬಿ ಹೀಗೆ ಚಾಟ್ಸ್ಗಳನ್ನು ಮಾರಾಟ ಮಾಡುವ ಅಂಗಡಿಗಳ ಮಂದಿ ತಮ್ಮಲ್ಲಿ ಉತ್ಪತ್ತಿಯಾಗುವ ಕಸ ತ್ಯಾಜ್ಯಗಳನ್ನೂ ಕೂಡ ಇದೇ ರಸ್ತೆ ಬದಿಯಲ್ಲಿ ಬಿಸಾಕುವ ಚಿತ್ರಣ ಒಂದೆಡೆಯಾದರೆ, ಆ ಕಸದ ರಾಶಿಯನ್ನು ಚೆಲ್ಲಾಪಿಲ್ಲಿಗೊಳಿಸಿ ಆಹಾರ ಅರಸುವ ಬೀಡಾಡಿ ದನಗಳ ಚಿತ್ರಣ ಮತ್ತೊಂದೆಡೆ ಕಂಡು ಬರುತ್ತಿದ್ದು ಪಂಚಾಯಿತಿ ಆಡಳಿತ ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕಿದೆ.
ಪಂಚಾಯಿತಿಯ ಕಸ ತುಂಬುವ ವಾಹನಗಳು ಪೇಟೆ ಬೀದಿಗಳಲ್ಲಿ ಬರುವಾಗ ಅಂಗಡಿಗಳ ಮಂದಿ ನಿಗದಿತ ಪ್ಲಾಸ್ಟಿಕ್ಗಳಲ್ಲಿ ಹಾಕಿಟ್ಟು ಕಸದ ವಾಹನಗಳಲ್ಲಿ ಹಾಕುವಂತಾಗಬೇಕು. ಅದು ಬಿಟ್ಟು ರಸ್ತೆ ಬದಿ ಬಿಸಾಕಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತಾಗಬೇಕು. ಹಾಗೆಯೇ ಬಡಾವಣೆಗಳ ಮಂದಿಯೂ ಕೂಡ ಇದೇ ನಿಯಮ ಪಾಲಿಸಬೇಕು.
ಕೆಲವು ನಿವಾಸಿಗಳು ಸಾಕು ಪ್ರಾಣಿಗಳ ಮೂತ್ರ ಹಾಗೂ ಮಹಿಳೆಯರು ಮಕ್ಕಳು ಬಳಸಿ ಬಿಸಾಕುವ ಪ್ಯಾಡ್ ಗಳನ್ನು ಸರಿಯಾದ ಕ್ರಮದಲ್ಲಿ ನಿರ್ವಹಣೆ ಮಾಡದಿರುವ ಬಗ್ಗೆ ಪೌರ ಕಾರ್ಮಿಕ ಸಿಬ್ಬಂದಿಗಳು ಹೇಳುತ್ತಾರೆ. ಕೆಲವು ಜನ ನಮ್ಮನ್ನು ಮನುಷ್ಯರಂತೆಯೇ ಕಾಣುವುದಿಲ್ಲ.
ಅಲ್ಲಿ ಬಾ, ಇಲ್ಲಿ ಬಾ, ಅದು ತಗೋ, ಇದು ತಗೋ ಎಂದೆಲ್ಲಾ ನಿಂದನೆಯ ಮಾತುಗಳನ್ನು ಕೂಡ ಆಡುತ್ತಾರೆ. ನಾವುಗಳು ಎಲ್ಲವನ್ನು ಸಹಿಸಿಕೊಂಡು ಕೆಲಸ ಮಾಡಬೇಕಿದೆ ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹೇಳುವಾಗ ಬೇಸರ ಮೂಡಿಸುತ್ತದೆ.
ನಮಗೆಲ್ಲಾ ಸುಂದರ ಬದುಕು ಕೊಟ್ಟಿರುವ ಈ ಭೂಮಿಗೆ ನಾವುಗಳು ಬೇರೇನನ್ನು ಕೊಡಲು ಸಾಧ್ಯವಿಲ್ಲ. ಕೊಡಬಹುದಾದರೆ ಅದು ಒಂದೇ ಒಂದು. ಅದುವೇ ನಮ್ಮ ಸುತ್ತಲ ಪರಿಸರವನ್ನು ಸ್ವಚ್ಛಂದವಾಗಿ ಇಟ್ಟುಕೊಳ್ಳುವುದು.
ಹಾಗಾಗಿ ಪೌರ ಕಾರ್ಮಿಕರೆಂಬ ಸ್ವಚ್ಛತೆಯ ಸೇನಾನಿಗಳನ್ನು ಅಪಮಾನಿಸದೇ ಆದರಿಸಿ ಗೌರವಿಸುವ ಮೂಲಕ ನಮ್ಮ ಪರಿಸರವನ್ನು ಪ್ರತಿಯೊಬ್ಬರು ಹಚ್ಚ ಹಸಿರಿನ ಹಂದರವಾಗಿಸೋಣ ಸಾಕು.
-ಕೆ.ಎಸ್. ಮೂರ್ತಿ