*ಸಿದ್ದಾಪುರ, ಸೆ. ೨೯: ಚೆನ್ನಯ್ಯನ ಕೋಟೆ ಗ್ರಾ.ಪಂ. ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಚೊಟ್ಟೆಪಾರೆ- ಬಸವನಹಳ್ಳಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದುರಸ್ತಿ ಕಾರ್ಯ ಕೈಗೊಳ್ಳದ ಆಡಳಿತ ವ್ಯವಸ್ಥೆ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಹನ ಸಂಚಾರ ಮಾತ್ರವಲ್ಲದೆ ಪಾದಚಾರಿಗಳಿಗೂ ಓಡಾಡಲಾಗದ ಪರಿಸ್ಥಿತಿಯಲ್ಲಿ ರಸ್ತೆ ಇದೆ. ಕೇವಲ ೫೦೦ ಮೀಟರ್ನಷ್ಟು ದೂರ ರಸ್ತೆ ಕಾಮಗಾರಿ ನಡೆಸಿದ್ದು, ಉಳಿದ ರಸ್ತೆಯನ್ನು ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ಶಾಸಕರಾದಿಯಾಗಿ ಎಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ದುರಸ್ತಿ ಪಡಿಸಿಲ್ಲವೆಂದು ಆರೋಪಿಸಿದ್ದಾರೆ. ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಗ್ರಾ.ಪಂ.ಗೆ ಗ್ರಾಮದ ಪ್ರಮುಖರು ಮನವಿ ಪತ್ರ ಸಲ್ಲಿಸಿದ್ದಾರೆ.