ಮಡಿಕೇರಿ, ಸೆ. ೩೦: ಸಂಸ್ಕೃತಿ ಮತ್ತು ಭಾಷೆ ಯಾರ ಸ್ವತ್ತಲ್ಲ. ಅದು ಎಲ್ಲರ ಸ್ವತ್ತು ಎಂದು ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಭಿಮತ ವ್ಯಕ್ತಪಡಿಸಿದರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗೌಡ ಸಮಾಜದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಅರೆಭಾಷೆ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾಷೆ - ಸಂಸ್ಕೃತಿ ಎಲ್ಲರ ಸ್ವತ್ತಾಗಿದ್ದು, ಸೂರ್ಯ, ಗಾಳಿ, ನೀರಿನಂತೆ ಎಲ್ಲರಿಗೂ ಅನ್ವಯಿಸುವಂತದ್ದು; ಸಂಸ್ಕೃತಿಯನ್ನು ಎಲ್ಲಿಯೂ ಹುಡುಕಬೇಕಾಗಿಲ್ಲ. ಅದು ನಮ್ಮೊಳಗಡೆ ಇದೆ; ನಾವು ಏನು ಆಗಿದ್ದೇವೆಯೋ ಅದೇ ಸಂಸ್ಕೃತಿ, ನಾವು ಹೇಗೆ ಕಾಣಿಸುತ್ತೇವೆಯೋ ಅದೇ ನಾಗರಿಕತೆ; ನಮ್ಮ ಅಂತಸತ್ವವನ್ನು ಉಳಿಸಿಕೊಂಡರೆ ಮಾತ್ರ ಮುಂದಕ್ಕೆ ನಮ್ಮನ್ನು ಉಳಿಸಿಕೊಳ್ಳಲು ಸಾಧ್ಯವೆಂದು ಹೇಳಿದರು.

ಸಂಸ್ಕೃತಿ ನಿಂತ ನೀರಲ್ಲ; ಅದು ಹರಿಯುವ ನೀರೆಂದು ಹೇಳಿದ ಅವರು, ಪ್ರಸ್ತುತ ಕಾಲಕ್ಕೆ ತಕ್ಕಂತೆ ಸಂಸ್ಕೃತಿ ಬದಲಾಗಿದೆ. ಸಂಸ್ಕೃತಿ, ಸಂಪನ್ನತೆಯನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಹೆಣ್ಣಿಗಿದೆ ಎಂದು ಹೇಳಿದರು. ಗೌಡ ಜನಾಂಗದವರಿಗಿರುವ ಇತಿಹಾಸ - ಸಂಸ್ಕೃತಿ ಬೇರೆಲ್ಲೂ ಕಾಣಿಸುವದಿಲ್ಲ ಎಂದು ಹೇಳಿದ ಅವರು, ಕೃಷಿಯನ್ನೇ ಪ್ರಧಾನ ಸಂಸ್ಕೃತಿಯನ್ನಾಗಿಸಿಕೊAಡಿರುವ ಗೌಡ ಜನಾಂಗದವರು ಇರುವಲ್ಲಿ ಗದ್ದೆಗಳನ್ನು ಪಾಳುಬಿಟ್ಟಿಲ್ಲ; ಯಾರು ಎಲ್ಲಿಂದ ಬಂದವರೆAಬದು ಮುಖ್ಯವಲ್ಲ; ಎಲ್ಲಿ ನೆಲೆಸಿದ್ದೇವೆ, ಎಲ್ಲಿ ಊಟ ಮಾಡುತ್ತಿದ್ದೇವೆ ಎಂಬದು ಮುಖ್ಯ. ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯ ಶ್ರೀಮಂತಿಕೆಯನ್ನು ಸೆಳೆಯುತ್ತದೆ; ಅದು ನಿರಂತರವಾಗಿರುತ್ತದೆ ಎಂದರು.

ಸೋಬಾನೆ ಹಾಡಿನಲ್ಲಿ ಗೌಡ ಸಂಸ್ಕೃತಿಯ ಸಾಂಸ್ಕೃತಿಕ ಕಟ್ಟಳೆ ನಿಂತಿದೆ ಎಂದ ಅವರು, ಹತ್ತು ಕುಟುಂಬ, ಹದಿನೆಂಟು ಗೋತ್ರಕ್ಕೆ ಹಿನ್ನೆಲೆಗಳಿವೆ. ಈ ಬಗ್ಗೆ ಅಧ್ಯಯನ ನಡೆಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮರಗೋಡು ಗೌಡ ಸಮಾಜದ ಅಧ್ಯಕ್ಷ ಕಟ್ಟೆಮನೆ ಕೆ.ಜನಾರ್ದನ ಅವರು ಮಾತನಾಡಿ ಕೊಡಗು, ದಕ್ಷಿಣ ಕನ್ನಡ ಹಾಗೂ ಕೇರಳದ ಸ್ಪಲ್ಪ ಭಾಗದಲ್ಲಿ ಅರೆಭಾಷಿಕರು ವಾಸಿಸುತ್ತಿದ್ದು, ಅನಾದಿಕಾಲದಿಂದಲೂ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅರೆಭಾಷೆ ಸಂಸ್ಕೃತಿಯು ಶ್ರೀಮಂತಿಕೆಯನ್ನು ಹೊಂದಿದ್ದು, ಇದನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ವತಿಯಿಂದ ಅರೆಭಾಷೆ ಸಾಂಸ್ಕೃತಿಕ ಶಿಬಿರ ಏರ್ಪಡಿಸಿರುವುದು ಸಹಕಾರಿಯಾಗಿದೆ ಎಂದರು.

ಮರಗೋಡು ಗ್ರಾ.ಪಂ. ಸದಸ್ಯ ಪರಿಚನ ಶರತ್ ಮಾತನಾಡಿ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗ್ರಾಮದಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರ ಏರ್ಪಡಿಸಿರುವುದು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗಿದೆ. ಇದರಿಂದ ಯುವ ಪೀಳಿಗೆ ಮಾಹಿತಿ ತಿಳಿಯಲು ಅನುಕೂಲವಾಗಿದೆ ಎಂದರು.

ಅಕಾಡೆಮಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ , ಚೊಕ್ಕಾಡಿ ಪ್ರೇಮ ರಾಘವಯ್ಯ, ಕೂಡಕಂಡಿ ಡಾ.ದಯಾನಂದ, ಇತರರು ಇದ್ದರು. ರಿಜಿಸ್ಟಾçರ್ ಚಿನ್ನಸ್ವಾಮಿ ಸ್ವಾಗತಿಸಿದರು. ಧನಂಜಯ ಅಗೋಳಿಕಜೆ ನಿರೂಪಿಸಿದರು. ವೆಂಕಟೇಶ್ ಮಾಳಿಗೆಮನೆ ವಂದಿಸಿದರು.

ಕಾರ್ಯಕ್ರಮದಲ್ಲಿ ಶಿಬಿರಾರ್ಥಿ ಗಳು ಕಲಿತ ಅರೆಭಾಷೆ ಸಂಸ್ಕೃತಿಯ ಮಗುವಿನ ನಾಮಕರಣ, ಮದುವೆ ದಿಬ್ಬಣ, ಮುಖ್ಯಸ್ಥರ ಮಾತುಕತೆ, ವೀಳ್ಯಶಾಸ್ತç, ಗಂಗೆಪೂಜೆ, ಎಣ್ಣೆ - ಅರಿಶಿಣ ಶಾಸ್ತç, ಹೆಣ್ಣು - ಗಂಡು ವಹಿಸಿಕೊಡುವ ಪದ್ಧತಿಗಳನ್ನು ಪ್ರದರ್ಶಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಪೋತಂಡ್ರ ತೇಜ ಪ್ರಸಾದ್, ಬೊಳ್ಳೂರು ಜಾನಕಿ ಉದಯಕುಮಾರ್ ತರಬೇತಿ ನೀಡಿದ್ದರು.