ಮಡಿಕೇರಿ, ಸೆ. ೨೯: ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ಗಿರಿಜನ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ನಡೆದಿರುವ ಹಣ ದುರುಪಯೋಗ ಪ್ರಕರಣದ ಕುರಿತು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಮೆರೆದಿದ್ದಾರೆ. ಇದನ್ನೇ ಕ್ಷÄಲ್ಲಕ ರಾಜಕಾರಣವೆಂದು ಟೀಕಿಸುತ್ತಿರುವ ಲ್ಯಾಂಪ್ಸ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಸ್.ಎನ್. ರಾಜಾರಾವ್ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಬಿಜೆಪಿ ಎಸ್.ಟಿ. ಮೋರ್ಚಾದ ರಾಜ್ಯ ನಿರ್ದೇಶಕ ಹಾಗೂ ಕೊಡಗು ಜಿಲ್ಲಾಧ್ಯಕ್ಷ ಮಿಟ್ಟುರಂಜಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದುರ್ಬಲರ ಏಳಿಗೆಗಾಗಿ ಇರುವ ಗಿರಿಜನ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಹಣ ದುರುಪಯೋಗವಾಗಿರುವುದು ಖಂಡನೀಯವಾಗಿದ್ದು, ಜನಪರ ಕಾಳಜಿ ಇರುವ ಶಾಸಕರು ಈ ಕುರಿತು ಪ್ರಶ್ನಿಸಿರುವುದು ಸ್ವಾಗತಾರ್ಹವೆಂದು ತಿಳಿಸಿದ್ದಾರೆ.

ಶಾಸಕ ಅಪ್ಪಚ್ಚು ರಂಜನ್ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ರಾಜಾರಾವ್ ಅವರು ಬಾಯಿಗೆ ಬಂದAತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿರುವ ಮಿಟ್ಟುರಂಜಿತ್, ಲ್ಯಾಂಪ್ಸ್ ಸಹಕಾರ ಸಂಘದ ಹಣ ದುರುಪಯೋಗದ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

ಜಿ.ಪಂ. ಮಾಜಿ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಎಸ್.ಟಿ. ಮೋರ್ಚಾದ ಕಾರ್ಯದರ್ಶಿ ಮಂಜುಳಾ, ರಾಜ್ಯ ಸದಸ್ಯ ಹಾಗೂ ಲ್ಯಾಂಪ್ಸ್ ಮಾಜಿ ನಿರ್ದೇಶಕ ಬಿ.ಕೆ. ಮೋಹನ್, ಮೋರ್ಚಾದ ಜಿಲ್ಲಾ ಸಂಚಾಲಕ ಪಿ.ಎಸ್. ಮುತ್ತ, ಪ್ರಧಾನ ಕಾರ್ಯದರ್ಶಿಗಳಾದ ಪರಮೇಶ್ವರ್, ಡಿ.ಆರ್. ಪ್ರಭಾಕರ್, ಉಪಾಧ್ಯಕ್ಷ ಕೆ.ಜಿ. ಕುಮಾರಸ್ವಾಮಿ ಹಾಗೂ ಲ್ಯಾಂಪ್ಸ್ ಸದಸ್ಯ ಆರ್. ಪ್ರಭಾಕರ್ ಅವರುಗಳು ಕೂಡ ತನಿಖೆಗೆ ಒತ್ತಾಯಿಸಿದ್ದಾರೆ.