ಸೋಮವಾರಪೇಟೆ, ಸೆ. ೨೯: ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯುವ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣದೊಂದಿಗೆ ಮಳೆ-ಬಿಸಿಲಿನಾಟ ಮುಂದುವರೆದಿದ್ದು, ಅವಧಿಗೂ ಮುನ್ನವೇ ಹಣ್ಣಾಗಿರುವ ಕಾಫಿಯಿಂದಾಗಿ ಅರೇಬಿಕಾ ಬೆಳೆಗಾರರು ತೊಳಲಾಟ ಅನುಭವಿಸುತ್ತಿದ್ದಾರೆ.

ಹವಾಮಾನ ವೈಪರೀತ್ಯದಿಂದಾಗಿ ಅವಧಿಗೂ ಮುನ್ನವೇ ಅರೆಬಿಕಾ ಕಾಫಿ ಹಣ್ಣಾಗಿದ್ದು, ಗಿಡಗಳಲ್ಲಿರುವ ಹಣ್ಣನ್ನು ಕೊಯ್ಲು ಮಾಡಲಾಗದೇ, ಅತ್ತ ಗಿಡಗಳಲ್ಲಿಯೂ ಬಿಡಲಾಗದ ತ್ರಿಶಂಕು ಪರಿಸ್ಥಿತಿಯಲ್ಲಿ ಬೆಳೆಗಾರರು ಸಿಲುಕಿದ್ದಾರೆ.

ತಾಲೂಕಿನ ಕೆಲವು ಕಡೆಗಳಲ್ಲಿ ಈಗಾಗಲೇ ಕಾಫಿ ಕೊಯ್ಲು ಮಾಡಲಾಗುತ್ತಿದ್ದರೂ ಪಲ್ಪರ್ ಮಾಡಲಾಗದ ಸ್ಥಿತಿಯಿಂದಾಗಿ ಸಮಸ್ಯೆಯಾಗಿದೆ. ಇದರೊಂದಿಗೆ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲೂ ಸಹ ಕಷ್ಟಸಾಧ್ಯವಾಗುತ್ತಿದೆ.

ಸಾಮಾನ್ಯವಾಗಿ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕೊಡಗು ಸೇರಿದಂತೆ ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಕಾಫಿ ಕೊಯ್ಲು ಆರಂಭವಾಗುತ್ತದೆ. ಆದರೆ ಪ್ರಸಕ್ತ ವರ್ಷ ಮುಂಗಾರು ಮಳೆ/ಹೂ ಮಳೆ ಉತ್ತಮವಾಗಿ ಸುರಿದಿದ್ದು, ನಂತರದ ದಿನಗಳಲ್ಲೂ ಆಗಾಗ್ಗೆ ಮಳೆಯಾದ ಪರಿಣಾಮ ಮೂರು ಬಾರಿ ಕಾಫಿ ಗಿಡಗಳಲ್ಲಿ ಹೂ ಬಿಟ್ಟು ಫಸಲು ಕಟ್ಟಿವೆ.

ಹೀಗೆ ಗಿಡಗಳಲ್ಲಿದ್ದ ಫಸಲು ಅತೀವೃಷ್ಟಿಗೆ ಸಿಲುಕಿ ಆಗಸ್ಟ್ ಕೊನೆಯ ವಾರ ಮತ್ತು ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಭಾರೀ ಪ್ರಮಾಣದಲ್ಲಿ ಕಾಫಿ ನೆಲಕ್ಕಚ್ಚಿದೆ. ಇದೀಗ ಉಳಿದಿರುವ ಅರೆಬಿಕಾ ಕಾಫಿ ಈಗಾಗಲೇ ಹಣ್ಣಾಗುತ್ತಿವೆ. ಆರಂಭದ ಮಳೆಗೆ ಹೂಬಿಟ್ಟು ಫಸಲು ಕಟ್ಟಿದ್ದ ಕಾಫಿ, ಇದೀಗ ಹಣ್ಣಾಗಿದ್ದು, ಇತ್ತ ಕೊಯ್ಲು ಮಾಡಲಾಗದೇ, ಅತ್ತ ಗಿಡಗಳಲ್ಲಿ ಉಳಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಬೆಳೆಗಾರರು ಇದ್ದಾರೆ.

ಕಾಫಿ ತೋಟಗಳಲ್ಲಿ ಈಗಲೂ ತೇವಾಂಶವಿದ್ದು, ಆಗಾಗ್ಗೆ ಮಳೆ ಸುರಿಯುತ್ತಿದೆ. ಇಂತಹ ಸಮಯದಲ್ಲಿ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡುವ ಸಂದರ್ಭ ಉಳಿದ ಕಾಫಿ

ಕಾಯಿ ಉದುರುವ ಆತಂಕ ಒಂದೆಡೆಯಾದರೆ,

(ಮೊದಲ ಪುಟದಿಂದ) ಬಿಸಿಲು ಇಲ್ಲದಿರುವುದರಿಂದ ಕೊಯ್ಲು ಮಾಡಿದ ಕಾಫಿಯನ್ನು ಒಣಗಿಸಲು ಸಾಧ್ಯವಾಗದ ಸ್ಥಿತಿ ಮತ್ತೊಂದೆಡೆ.

ಕಾಫಿ ಫಸಲು ಸಂಪೂರ್ಣ ವಾಗಿ ಹಣ್ಣಾದ ನಂತರ ಒಂದೇ ಬಾರಿ ಕೊಯ್ಲು ಮಾಡಿದರೆ ಸುಲಭವಾಗುತ್ತದೆ. ಆದರೆ ಇದೀಗ ಗಿಡದಲ್ಲಿ ಅರ್ಧದಷ್ಟು ಫಸಲು ಹಣ್ಣಾಗಿದ್ದು, ಎರಡು ಮೂರು ಬಾರಿ ಕೊಯ್ಲು ಮಾಡಬೇಕಾದ ಪರಿಸ್ಥಿತಿ ಎದುರಾಗಿರುವುದರಿಂದ ಕೊಯ್ಲಿಗೆ ಹೆಚ್ಚಿನ ಹಣ ವ್ಯಯವಾಗಲಿದೆ. ಈ ನಡುವೆ ಹಣ್ಣಾಗಿರುವ ಕಾಫಿಯನ್ನು ಗಿಡದಲ್ಲಿ ಹಾಗೇ ಬಿಟ್ಟರೆ ಬಂದಿರುವ ಫಸಲು ನೆಲಕಚ್ಚುವ ಭೀತಿಯಿಂದಾಗಿ, ಹೊರೆಯಾದರೂ ಕಾರ್ಮಿಕರಿಂದ ಫಸಲು ಕೊಯ್ಲು ಮಾಡಿಸುತ್ತಿದ್ದಾರೆ. ತಾಲೂಕಿನ ಸೋಮವಾರಪೇಟೆ ಕಸಬಾ, ಶಾಂತಳ್ಳಿ, ಕೊಡ್ಲಿಪೇಟೆ, ಶನಿವಾರಸಂತೆ ಭಾಗದಲ್ಲಿ ಕಾಫಿ ಹಣ್ಣಾಗಿದೆ. ಪ್ರಸ್ತುತ ಕಾಫಿ ತೋಟಗಳಲ್ಲಿ ಗಿಡಗಳ ಬುಡ ಬಿಡಿಸುವುದು, ಗೊಬ್ಬರ ಹಾಕುವ ಕೆಲಸ ನಡೆಯುತ್ತಿದೆ. ಈ ನಡುವೆ ಕಾಫಿಯೂ ಹಣ್ಣಾಗಿದೆ. ಹವಾಮಾನ ವೈಪರೀತ್ಯ, ಅಧಿಕ ನಿರ್ವಹಣಾ ವೆಚ್ಚ, ಕಾರ್ಮಿಕರ ಸಮಸ್ಯೆಗಳನ್ನು ಎದುರಿಸುತ್ತಿರುವ ಬೆಳೆಗಾರರಿಗೆ, ಇದೀಗ ಅವಧಿಗೆ ಮುನ್ನವೇ ಕಾಫಿ ಹಣ್ಣಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅAದಾಜಿನ ಪ್ರಕಾರ ಜಿಲ್ಲೆಯಲ್ಲಿ ೧,೦೨,೫೨೫ ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, ೭೪,೪೯೫ಹೆಕ್ಟೇರ್‌ನಲ್ಲಿ ರೋಬಸ್ಟಾ, ೨೮,೦೩೦ಹೆಕ್ಟೇರ್‌ನಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲೂಕು ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿರುವದರಿಂದ, ಸೋಮವಾರಪೇಟೆ ತಾಲೂಕಿನಲ್ಲಿಯೇ ೨೩,೯೫೦ ಹೆಕ್ಟೇರ್‌ನಲ್ಲಿ ಅರೇಬಿಕಾ, ೫,೮೯೦ ಹೆಕ್ಟೇರ್‌ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ.