ಮಡಿಕೇರಿ, ಸೆ. ೨೯: ಹಲವು ಕ್ಷೇತ್ರಗಳಿಗೆ ಕೊಡಗು ಜಿಲ್ಲೆ ತನ್ನದೇಯಾದ ಕೊಡುಗೆಯನ್ನು ನೀಡಿದೆ. ಆದರೆ, ಬೇರೆ ರಾಜ್ಯ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾಂಸ್ಕೃತಿಕ ರಂಗಕ್ಕೆ ಕೊಡಗಿನ ಕೊಡುಗೆ ಸಾಲದು. ಈ ಹಿನ್ನೆಲೆಯಲ್ಲಿ ಕೊಡಗು ಸಾಂಸ್ಕೃತಿಕ ರಂಗಕ್ಕೂ ಕೊಡುಗೆಯನ್ನು ನೀಡುವಂತಾಗಬೇಕೆAದು ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಆಶಯ ವ್ಯಕ್ತಪಡಿಸಿದರು.

ರಂಗಾಯಣ ಮೈಸೂರು, ರಂಗಭೂಮಿ ಪ್ರತಿಷ್ಠಾನ ಕೊಡಗು, ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸ ಲಾಗಿದ್ದ ಸಿಜಿಕೆ ರಂಗ ಪುರಸ್ಕಾರ, ‘ಬಹುರೂಪಿ’ ಸಾಕ್ಷö್ಯ ಚಿತ್ರಪ್ರದರ್ಶನ ಕಾರ್ಯಕ್ರಮದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ನಾಡಿನ ಸಂಸ್ಕೃತಿಯನ್ನು ಉಳಿಸುವವರು ಕಲಾವಿದರು ಹಾಗೂ ಕವಿಗಳು ಎಂದು ಹೇಳಿದ ಸುಬ್ರಾಯ ಸಂಪಾಜೆ ಸಾಹಿತ್ಯ, ಸಂಗೀತ, ಶಿಲ್ಪಕಲೆ, ನಾಟಕ, ಲಲಿತ ಕಲೆಗಳು ಮನುಷ್ಯನನ್ನು ಸುಸಂಸ್ಕೃತನನ್ನಾಗಿಸುತ್ತವೆ. ಅವುಗಳಲ್ಲಿ ನಾಟಕ ಕಲೆ ಪ್ರಮುಖವಾದದ್ದು ಎಂದು ಅವರು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಯಾಗಿದ್ದ ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡಗಿನಲ್ಲಿ ರಂಗಭೂಮಿ ಕೋಮ ಸ್ಥಿತಿಯಲ್ಲಿದ್ದು, ರಂಗಭೂಮಿಯನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸಗಳಾಗಬೇಕೆಂದು ಸಲಹೆಯಿತ್ತರು. ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರ್ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಕಳೆದ ೧೦ ವರ್ಷಗಳಿಂದ ಪ್ರಮುಖ ರಂಗ ತಜ್ಞ ವಿಶೇಷ ಚೇತನರಾದ, ನಾಟಕ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಸಿ.ಜಿ. ಕೃಷ್ಣಸ್ವಾಮಿ ಅವರ ಹೆಸರಿನಲ್ಲಿ ಪುರಸ್ಕಾರವನ್ನು ನೀಡಲಾಗುತ್ತಿದ್ದು, ರಾಜ್ಯದ ೨೦ ಜನರಿಗೆ ಈ ಪುರಸ್ಕಾರ ಘೋಷಣೆ ಯಾಗಿದ್ದು, ಕೊಡಗಿನ ಮಾದೇಟಿರ ಬೆಳ್ಯಪ್ಪ, ಚೆಪ್ಪುಡಿರ ಉತ್ತಪ್ಪ ಅವರುಗಳೂ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ಹೇಳಿದರು.

ರಂಗಕರ್ಮಿಗಳಾದ ಮಾದೇಟಿರ ಬೆಳ್ಯಪ್ಪ ಹಾಗೂ ಚೆಪ್ಪುಡಿರ ಉತ್ತಪ್ಪ ಇವರುಗಳಿಗೆ ಗಣ್ಯರು ಪ್ರತಿಷ್ಠಿತ ಸಿ.ಜಿ.ಕೆ. ರಂಗ ಪುರಸ್ಕಾರ ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಾದೇಟಿರ ಬೆಳ್ಯಪ್ಪ ರಂಗಭೂಮಿ ಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಾಲಾ ಪಠ್ಯ ಕ್ರಮದಲ್ಲಿಯೇ ರಂಗ ಭೂಮಿಯನ್ನು ಅಳವಡಿಸುವಂತಾಗ ಬೇಕೆಂದು ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ರಂಗಭೂಮಿ ಪ್ರತಿಷ್ಠಾನದ ಸಂಚಾಲಕಿ ಅನಿತಾ ಕಾರ್ಯಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ‘ಬಹುರೂಪಿ’ ಸಾಕ್ಷö್ಯ ಚಿತ್ರ ಪ್ರದರ್ಶನ ನಡೆಯಿತು. ಕುಸುಮಾ ಮಾದಪ್ಪ ಪ್ರಾರ್ಥಿಸಿ, ಪ್ರೆಸ್‌ಕ್ಲಬ್ ನಿರ್ದೇಶಕ ಸುನಿಲ್ ಪೊನ್ನೆಟ್ಟಿ ನಿರೂಪಿಸಿ, ಪ್ರಸಿನ್ ಸ್ವಾಗತಿಸಿ, ಅನಿತಾ ಕಾರ್ಯಪ್ಪ ವಂದಿಸಿದರು.