ಕೂಡಿಗೆ, ಸೆ. ೩೦: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಿನಿ ವಿಮಾನ ನಿಲ್ದಾಣ ಮಾಡುವ ಯೋಜನೆಯ ಅಡಿಯಲ್ಲಿ ಕೊಡಗು ಜಿಲ್ಲೆಯಲ್ಲಿಯು ಮಿನಿ ವಿಮಾನ ನಿಲ್ದಾಣ ಮಾಡುವ ಚಿಂತನೆ ನಡೆದಿದ್ದು ಅದರ ಕ್ರಿಯಾ ಯೋಜನೆ ಕಾರ್ಯ ಚಟುವಟಿಕೆಗಳು ಪ್ರಗತಿಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ವಿಮಾನ ಯಾನ ಇಲಾಖೆಗೆ ಸಂಬAಧಿಸಿದ ಸಚಿವರು ಕೊಡಗು ಜಿಲ್ಲೆಯ ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿ ಈಗಾಗಲೇ ಕಾಯ್ದಿರಿಸಿದ ಜಾಗವನ್ನು ಪರಿಶೀಲನೆ ನಡೆಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ನವರು ಮನವಿ ಮಾಡಿದ್ದಾರೆ.

ಶಾಸಕರು ಕೂಡಿಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕೂಡಿಗೆಯ ಕೃಷಿ ಕ್ಷೇತ್ರದ ವ್ಯಾಪ್ತಿಯಲ್ಲಿ ವಿಸ್ತರಣಾ ಜಾಗವಿದ್ದು, ಈ ಸ್ಥಳಕ್ಕೆ ಕೇಂದ್ರ ಮತ್ತು ರಾಜ್ಯ ಮಟ್ಟದ ಮಿನಿ ವಿಮಾನಯಾನ ಇಲಾಖೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿಗಳನ್ನು ನೀಡಿರುತ್ತಾರೆ ಆದರೆ ಇಲಾಖೆಯಿಂದ ಸಮರ್ಪಕವಾದ ಉತ್ತರ ಬರದ ಕಾರಣ ವಿಧಾನ ಸಭೆಯಲ್ಲಿ ಸಂಬAಧಿಸಿದ ಕೇಂದ್ರ ಸಚಿವರು ಮತ್ತು ರಾಜ್ಯ ಸರಕಾರದ ಅಧಿಕಾರಿ ವರ್ಗದವರು ಕೊಡಗು ಜಿಲ್ಲೆಯ ಕೂಡಿಗೆ ಕೃಷಿ ಕ್ಷೇತ್ರದಲ್ಲಿ ಕಾಯ್ದಿರಿಸಿದ ಜಾಗವನ್ನು ಕೇಂದ್ರ ಸಚಿವರೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಮನವಿಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಕಳೆದ ಎರಡು ವರ್ಷಗಳಿಂದಲೂ ಮಿನಿ ವಿಮಾನ ನಿಲ್ದಾಣದ ಜಾಗದ ಸರ್ವೆ ಸೇರಿದಂತೆ ಅದರ ಹದ್ದುಬಸ್ತು ಗುರುತಿಸುವಿಕೆ, ಕಾರ್ಯ ಸೇರಿದಂತೆ ಸರಕಾರದಿಂದ ಹಣವನ್ನು ಕಾಯ್ದಿರಿಸುವ ವಿಷಯಗಳ ಬಗ್ಗೆ ಚರ್ಚೆಗಳು ಕೇಂದ್ರ ಮಟ್ಟದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಕೇಂದ್ರ ತಂಡವು ಜಿಲ್ಲೆಗೆ ಭೇಟಿ ನೀಡಲಿದ್ದು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ನಂತರ ಯೋಜನೆಯನ್ನು ಕಾರ್ಯಗತಗೊಳಿಸಲು ಪ್ರಯತ್ನ ಮಾಡಲಾಗುತ್ತದೆ ಎಂದು ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದರು.