ಮಡಿಕೇರಿ, ಸೆ.೨೯: ವಿಶ್ವ ರೇಬಿಸ್ ದಿನಾಚರಣೆ ಪ್ರಯುಕ್ತ ಕೊಡಗು ಜಿಲ್ಲೆಯ ವಿವಿಧ ಪಶುವೈದ್ಯ ಸಂಸ್ಥೆಗಳಲ್ಲಿ ಸಾಕು ನಾಯಿಗಳಿಗೆ ರೇಬಿಸ್ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಶುವೈದ್ಯ ಆಸ್ಪತ್ರೆಯಲ್ಲಿ ಪಶುಪಾಲನಾ ಇಲಾಖಾ ಉಪ ನಿರ್ದೇಶಕರಾದ ಡಾ.ಸುರೇಶ ಭಟ್, ಡಾ.ಮಾದಪ್ಪ ಅವರು ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಡಿಕೇರಿ ಪಶುವೈದ್ಯ ಆಸ್ಪತ್ರೆಯಲ್ಲಿ ಅಕ್ಟೋಬರ್ ೧ ರವರೆಗೆ ರೇಬಿಸ್ ಉಚಿತ ಲಸಿಕೆ ನೀಡಲಾಗುವುದು. ಅಲ್ಲದೇ ಪ್ರತೀ ವರ್ಷವೂ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಆದ್ದರಿಂದ ಕಾಲಕಾಲಕ್ಕೆ ಲಸಿಕೆ ಹಾಕಿಸಲು ಅನುಕೂಲವಾಗಲಿದೆ. ಸಾಕು ಪ್ರಾಣಿ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ಕೋರಿದರು.
ಜಿಲ್ಲಾ ಪಶುವೈದ್ಯ ಆಸ್ಪತ್ರೆಯ ಮುಖ್ಯ ಪಶುವೈದ್ಯಾದಿಕಾರಿ ಡಾ.ಚಿದಾನಂದ ಅವರು ನಗರ ಪ್ರದೇಶದಲ್ಲಿ ಬೀದಿನಾಯಿಗಳು ಹೆಚ್ಚಾಗಿ ಕಂಡುಬರುತ್ತವೆ. ಅವುಗಳಿಂದ ಸಾಕುನಾಯಿಗಳಿಗೂ ರೇಬಿಸ್ ರೋಗ ಹರಡಬಹುದಾದ ಸಾದ್ಯತೆಗಳು ಜಾಸ್ತಿ. ಆದ್ದರಿಂದ ನಗರವಾಸಿ ಶ್ವಾನಪಾಲಕರು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಡಾ.ಪ್ರಸನ್ನ ಗ್ರಾಮ ಮಟ್ಟದಲ್ಲೂ ಇಂತಹ ಕಾರ್ಯಕ್ರಮ ನಡೆಸಲು ಇಲಾಖೆ ಆಸಕ್ತಿ ಹೊಂದಿದೆ. ಗ್ರಾಮ ಪಂಚಾಯತ್ಗಳು ಅಥವಾ ಸೇವಾ ಸಂಸ್ಥೆಗಳು ಪ್ರಾಯೋಜಕತ್ವ ನೀಡಿದಲ್ಲಿ ಗ್ರಾಮಮಟ್ಟದಲ್ಲೂ ಮುಂದಿನ ದಿನಗಳಲ್ಲಿ ಉಚಿತ ಲಸಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು. ಇಲಾಖಾ ಪಶುವೈದ್ಯ ಪರೀಕ್ಷಕರಾದ ಭಾಗೀರಥಿ ಮತ್ತು ತರಬೇತಿ ಪಶುವೈದ್ಯ ವಿದ್ಯಾರ್ಥಿಗಳು ಲಸಿಕೆ ಕಾರ್ಯಕ್ರಮದಲ್ಲಿ ಸಹಕರಿಸಿದರು.